ಬೆಂಗಳೂರು ;- ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಮಾಜಿ ಶಾಸಕ ಸಿಟಿ ರವಿ ಹೇಳಿದ್ದಾರೆ.
ಬಿಜೆಪಿಯ ಮುಂದಿನ ರಾಜ್ಯಾಧ್ಯಕ್ಷರು ಎನ್ನುವ ಸುದ್ದಿ ಹರಿದಾಡುತ್ತಿರುವಾಗಲೇ ಈ ಸ್ಪಷ್ಟನೆ ನೀಡಿರುವ ಅವರು, ಊಹಾತ್ಮಕವಾದ ಪ್ರಶ್ನೆಗಳಿಗೆ ನಾನು ಉತ್ತರಿಸುವುದಿಲ್ಲ. ಸದ್ಯಕ್ಕೆ ನಾನೀಗ ಮಾಜಿ ಪ್ರಧಾನ ಕಾರ್ಯದರ್ಶಿ ಎಂಬುದಷ್ಟೇ ವರ್ತಮಾನ. ಭವಿಷ್ಯದ ಬಗ್ಗೆ ಈಗಲೇ ಏನನ್ನೂ ಹೇಳುವುದಿಲ್ಲ ಎಂದರು.
ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಾಯುವವರೆಗೆ ಶಾಶ್ವತವಾದ ಜವಾಬ್ದಾರಿಗಳು ಯಾವೂ ಇಲ್ಲ. 1988ರಿಂದ ಪಕ್ಷದಲ್ಲಿದ್ದೇನೆ. ಬೂತ್ ಅಧ್ಯಕ್ಷನಿಂದ ಹಿಡಿದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿವರೆಗಿನ ಹುದ್ದೆಗಳನ್ನು ಪಕ್ಷ ನೀಡಿದೆ. 2 ವರ್ಷ 10 ತಿಂಗಳು ಈ ಹುದ್ದೆಯಲ್ಲಿ ಕೆಲಸ ಮಾಡಲು ಪಕ್ಷ ಅವಕಾಶ ಕೊಟ್ಟಿತ್ತು. ಪಕ್ಷದ ಯಾವುದೇ ಕೆಲಸವನ್ನು ನಾನು ಕಾರ್ಯಕರ್ತ ಎನ್ನುವ ಮನಸ್ಥಿತಿಯಲ್ಲೇ ಮಾಡುತ್ತೇನೆ. ಅದೊಂದೇ ಶಾಶ್ವತ ಎಂದರು.