ಚಿಕ್ಕಮಗಳೂರು: ರಾಜ್ಯದಲ್ಲಿ ಈಗಾಗಲೇ ಗೃಹಜ್ಯೋತಿ (Gruhajyothi) ಆರಂಭವಾಗಿದೆ. ಆಗಸ್ಟ್ ತಿಂಗಳಲ್ಲಿ ಬರುವ ಜುಲೈ ತಿಂಗಳ ಬಿಲ್ ಎಲ್ಲರಿಗೂ ಫ್ರೀ ಸಿಗಲಿದೆ ಎಂದು ಇಂಧನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ (K.J.George) ಹೇಳಿದ್ದಾರೆ. ಚಿಕ್ಕಮಗಳೂರು (Chikkamagaluru) ನಗರದ ನೌಕರರ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಉಮನ್ ಚಾಂಡಿಯವರು ನಿಧನ ಹೊಂದಿದ್ದರಿಂದ ಸಭೆ ಮುಂದೆ ಹೋಗಿದೆ ಅಷ್ಟೇ. ರಾಹುಲ್ ಗಾಂಧಿ (Rahul Gandhi) ಬಾರದ ಕಾರಣ ಸಭೆ ತಾತ್ಕಾಲಿಕವಾಗಿ ಪೋಸ್ಟ್ಪೋನ್ ಆಗಿದೆ. ಯಾರ ಮೇಲೂ ಯಾರಿಗೆ ಅಸಮಾಧಾನ, ಏನೂ ಇಲ್ಲ ಎಂದರು.
ಯಾರೂ ಕೂಡಾ ಶಾಸಕ ಬಿ.ಆರ್.ಪಾಟೀಲ್ (B.R.Patil) ಅವರ ರಾಜೀನಾಮೆ ಕೇಳಿಲ್ಲ. ಪಾಟೀಲ್ ವಿಚಾರದಲ್ಲಿ ಒಳ್ಳೆಯದ್ದನ್ನೇ ಮಾತನಾಡಿದ್ದಾರೆ. ಕೆಲ ಸಚಿವರಿಗೆ ಬೇಜಾರು ಇರಬಹುದು. ಯಾಕೆಂದರೆ ಅಭಿವೃದ್ಧಿ ಕಾರ್ಯವನ್ನು ತಾತ್ಕಾಲಿಕವಾಗಿ ತಡೆಹಿಡಿದಿದ್ದೇವೆ. ಆದರೆ ಅದನ್ನು ಪುನಃ ಪ್ರಾರಂಭ ಮಾಡಲು ಆದೇಶ ನೀಡಲು ಮುಂದಾಗಿದ್ದಾರೆ. ಬಜೆಟ್ನಲ್ಲಿ ಇರುವ ಎಲ್ಲಾ ಅಭಿವೃದ್ಧಿ ಕಾರ್ಯಗಳು ಆಗುತ್ತದೆ. ಆದರೆ ಹೊಸ ಕಾರ್ಯಕ್ರಮಕ್ಕಷ್ಟೇ ನಿರ್ಬಂಧ ಎಂದು ಹೇಳಿದರು.
ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿರುವ ಕಸ್ತೂರಿ ರಂಗನ್ ವರದಿಯ ಆತಂಕದ ಬಗ್ಗೆ ಪ್ರತಿಕ್ರಿಯೆ ನೀಡಿದ ಜಾರ್ಜ್, ರಾಜ್ಯದಲ್ಲಿ ಹಲವು ಸರ್ಕಾರಗಳು ಆಡಳಿತ ನಡೆಸಿವೆ. ಆದರೆ, ಯಾವ ಮಂತ್ರಿ ಮಂಡಲದಲ್ಲೂ ಸೆನ್ಸಿಟಿವ್ ಝೋನ್ ಬಗ್ಗೆ ತೀರ್ಮಾನ ಆಗಿರಲಿಲ್ಲ. ಪ್ರತಿ ಸರ್ಕಾರದ ಅವಧಿಯಲ್ಲೂ ಮುಂದೆ ಹೋಗುತ್ತಿತ್ತು. ಆದರೆ ಈಗ ಸೆನ್ಸಿಟಿವ್ ಝೋನ್ ಮಾಡಲು ಕ್ಯಾಬಿನೆಟ್ ಉಪಸಮಿತಿ ರಚನೆಗೆ ಅಧಿಕಾರ ಕೊಟ್ಟಿದ್ದೇವೆ ಎಂದರು.