ಬೆಂಗಳೂರು: ಈ ನಕಲಿ ಸುಲಿಗೆ ಪ್ರಕರಣಕ್ಕೆ ಕಥೆ-ಚಿತ್ರಕಥೆ ನಿರ್ದೇಶನ ಎಲ್ಲವೂ..ಈತನದ್ದೇ.. ಅರ್ಥಾತ್ ದೂರುದಾರನೇ ಆರೋಪಿಯಾಗಿದ್ದಾನೆ. ಸಿನಿಶೈಲಿಯಲ್ಲಿ ವ್ಯವಸ್ಥಿತ ಸಂಚು ರೂಪಿಸಿ ಅಪರಾಧವೆಸಗಲು 20 ದಿನಗಳ ಕಾಲ ತರಬೇತಿ ಪಡೆದು ನಡೆಯದಿರುವ ಅಪರಾಧಕ್ಕೆ ನಡೆದಿದೆ ಸಾಕ್ಷ್ಯಧಾರ ತೋರಿಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ.
ಇನ್ಸೂರೆನ್ ಹಣ ಕ್ಲೇಮ್ ಮಾಡಿಕೊಳ್ಳಲು ಪಕ್ಕ ಪ್ಲ್ಯಾನ್ ಮಾಡಿ ಬೈಕ್ ನಲ್ಲಿ ಹೋಗುವಾಗ ಸುಲಿಗೆಕೋರರು 4 ಕೋಟಿ ಮೌಲ್ಯದ 3.780 ಕೆ.ಜಿ. ಚಿನ್ನ ದೋಚಿದ್ದಾರೆ ಎಂದು ಸುಳ್ಳು ದೂರು ನೀಡಿದ್ದ ಜ್ಯೂವೆಲ್ಲರಿ ಶಾಪ್ ಮಾಲೀಕನನ್ನ ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಕೃತ್ಯವೆಸಲು ಬಳಸಿಕೊಂಡಿದ್ದ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ರಾಜಸ್ತಾನ ಮೂಲದ ರಾಜು ಜೈನ್ ಬಂಧಿತ ಮಾಲೀಕ. ನಗರ್ತಪೇಟೆಯ ಕೇಸರ್ ಜ್ಯೂವೆಲರ ಶಾಪ್ ನ ಮಾಲೀಕನಾಗಿದ್ದಾನೆ. ಜುಲೈ 12 ರಂದು ಸಂಜೆ 7.30ಕ್ಕೆ ಹೈದರಬಾದಿಗೆ 3.780 ಕೆ.ಜಿ ಚಿನ್ನ ಕಳುಹಿಸಲು ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ತೆಗೆದುಕೊಂಡು ಹೋಗುವಾಗ ಮಾರ್ಕೆಟ್ ಮೇಲುಸೇತುವೆ ಬಳಿ ಅಪರಿಚಿತರು ಹಿಂದಿನಿಂದ ಕಾಲಿನಿಂದ ಹೊಡೆದು ಬ್ಯಾಗ್ ನಲ್ಲಿ ಚಿನ್ನಾಭರಣ ದೋಚಿದ್ದಾರೆ ಎಂದು ಆರೋಪಿ ರಾಜು ಜೈನ್ ಕಾಟನ್ ಪೇಟೆ ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು.
ರಾಜು ಜೈನ್ ನಿಂದ ಎಲ್ಲ ಮಾಹಿತಿ ಪಡೆದುಕೊಂಡು ತನಿಖೆ ನಡೆಸಿದ ಪೊಲೀಸರಿಗೆ ದೂರುದಾರನ ಹೇಳಿಕೆ, ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದರೂ ಪ್ರಯೋಜನವಾಗಿರಲಿಲ್ಲ. ತಮ್ಮ ಮೇಲೆ ಅನುಮಾನ ಬರದಿರಲು ನಾನಾ ತಂತ್ರಗಳನ್ನ ರೂಪಿಸಿಕೊಂಡಿದ್ದ ಜೈನ್, ಅಧಿಕಾರಿಗಳಿಂದ ಹಾಗೂ ಸಂಬಂಧಿಕರಿಂದ ಪೋನ್ ಮಾಡಿಸಿ ಪೊಲೀಸರ ಮೇಲೆ ಒತ್ತಡ ಹಾಕಿಸಿದ್ದ.
ತಾಂತ್ರಿಕ ಹಾಗೂ ವೈಜ್ಞಾನಿಕವಾಗಿ ತನಿಖೆ ನಡೆಸಿದರೂ ಪ್ರಯೋಜನವಾಗದ ಪರಿಣಾಮ ವ್ಯೂಹ ರೂಪಿಸಿದ ಪೊಲೀಸರು ದೂರುದಾರ ಜೈನ್, ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರು ಕಾನೂನುಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಮೊಬೈಲ್ ಜಪ್ತಿ ಮಾಡಿಕೊಂಡು ಪರಿಶೀಲನೆ ವೇಳೆ ಅದೊಂದು ವಾಟ್ಸಾಪ್ ಕರೆ ದೂರುದಾರರ ಅಸಲಿ ಬಣ್ಣ ಬಯಲಾಗುವಂತೆ ಮಾಡಿದೆ
ಹಣ ಸಂಪಾದನೆಗಾಗಿ ವಾಮ ಮಾರ್ಗಕ್ಕೆ ಮೊರೆ ಹೋಗಿದ್ದ ರಾಜು ಜೈನ್, ಚಿನ್ನಾಭರಣ ಕಳ್ಳತವಾದರೆ ಸುಲಭವಾಗಿ ಸುಲಭವಾಗಿ ಇನ್ಶೂರೆನ್ಸ್ ಕ್ಲೇಮ್ ಮಾಡಿಕೊಳ್ಳಬಹುದ ಎಂದು ಭಾವಿಸಿದ್ದ. ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಉದ್ದೇಶಪೂರ್ವವಾಗಿಯೇ ಇಬ್ಬರು ಬಾಲಕರನ್ನ ಕೃತ್ಯಕ್ಕೆ ಬಳಸಿಕೊಂಡಿದ್ದ. ಸುಲಿಗೆಯಾಗಿದೆ ಎಂದು ಪೊಲೀಸರಿಗೆ ನಂಬಿಕೆ ಬರಿಸಲು 20 ದಿನಗಳ ಹಿಂದೆ ಪ್ಲ್ಯಾನ್ ಮಾಡಿದ್ದ. ಎಲ್ಲೆಲ್ಲಿ ಸಿಸಿಟಿವಿಗಳಿವೆ ಎಂಬುದನ್ನ ಅಧ್ಯಯನ ಮಾಡಿದ್ದ. ಹೇಗೆ ಅಪರಾಧ ಎಸಗಬೇಕು ? ಯಾವ ರೀತಿ ತಂತ್ರ ರೂಪಿಸಿದರೆ ಪೊಲೀಸರು ನಂಬುತ್ತಾರೆ ? ಪೊಲೀಸರು ಪ್ರಶ್ನಿಸಿದರೆ ಹೇಗೆ ವರ್ತಿಸಬೇಕು ? ಏನು ಹೇಳಬೇಕು ಎಂಬುದರ ಬಗ್ಗೆ ಹುಡುಗರಿಗೆ ತರಬೇತಿ ನೀಡಿದ್ದ. ಇದರಂತೆ ಮಾರ್ಕೆಟ್ ಮೇಲು ಸೇತುವೆ ಬಳಿ ಸಿಸಿಟಿವಿ ಇಲ್ಲದಿರುವುದನ್ನ ಖಚಿತಪಡಿಸಿಕೊಂಡು ಅಲ್ಲೇ ಸುಲಿಗೆಯಾಗಿದೆ ಎಂದು ಪೊಲೀಸರಿಗೆ ಕಥೆ ಕಟ್ಟಿದ್ದ.
ಬೈಕ್ ನಲ್ಲಿಟ್ಟಿದ್ದ ಹಣವನ್ನ ಖುದ್ದು ಜೈನ್ ಘಟನಾ ಸ್ಥಳಕ್ಕೆ ತೆರಳಿ ಸುಲಿಗೆಯಾಗಿದೆ ಎಂದು ಬಿಂಬಿಸಿಕೊಂಡಿದ್ದ. ಅನಂತರ ಚಿನ್ನವಿರುವ ಬ್ಯಾಗ್ ನ್ನ ತಮ್ಮ ಸ್ಕೂಟರ್ ಡಿಕ್ಕಿಯಲ್ಲಿ ಇಟ್ಟುಕೊಂಡು ಕಾಟನ್ ಪೇಟೆ ಪೊಲೀಸರಿಗೆ ದೂರು ನೀಡಿದ್ದ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ.