ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ರಾಷ್ಟ್ರ ವಿರೋಧಿ ಹಾಗೂ ಭಯೋತ್ಪಾದಕರ ಪರವಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಬಂದ ಮೇಲೆ ಜಿಹಾದಿಗಳು ತಲೆ ಎತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆದಮೇಲೆ ಹಿಂದೂ ವಿರೋಧಿ ನೀತಿ ಹೆಚ್ಚಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಿಎಂ, ಗೃಹ ಸಚಿವರು ವಿಫಲರಾಗಿದ್ದಾರೆ.
ಸಿದ್ದರಾಮಯ್ಯ, ಜಿ. ಪರಮೇಶ್ವರ್ ಕೇರಳ ಫೈಲ್ಸ್ (Kerala Files) ಸಿನಿಮಾ ನೋಡಲಿ. ಉಡುಪಿಯಲ್ಲಿ ನಡೆದಿರೋದು ಕೇರಳ ಫೈಲ್ಸ್ ಸಿನಿಮಾ. ಕಾಂಗ್ರೆಸ್ ಗೆದ್ದಾಗಲೇ ಪಾಕಿಸ್ತಾನ ಪರ ಜಯಘೋಷ ಕೂಗಿದರು. ಆದರೆ ಈವರೆಗೂ ಅವರನ್ನು ಸಿದ್ದರಾಮಯ್ಯ ಜೈಲಿಗೆ ಹಾಕಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಾಗ್ದಾಳಿ ಮಾಡಿದರು.
ಉಡುಪಿ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ಖಾಸಗಿ ಚಿತ್ರಿಕರಣ ಪ್ರಕರಣ ಖಂಡಿಸಿ ಮಂಗಳೂರಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಇದು ಷಂಡತನದ ಮತ್ತು ನಿರ್ವೀರ್ಯದ ಸರ್ಕಾರ. ಬಿಜೆಪಿ ಸರ್ಕಾರ ಇಲ್ಲಿ ತಾಕತ್ತು ತೋರಿಸಿದೆ. ಎನ್ಐಎ ಮೂಲಕ ಪಿಎಫ್ಐ ಹುಟ್ಟಡಗಿಸಿ ನಿಷೇಧ ಮಾಡಲಾಗಿದೆ. ಇವತ್ತು ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಜಿಹಾದಿಗಳ ಜೊತೆ ಕೈ ಜೋಡಿಸಿದ್ದಾರೆ ಎಂದು ಆರೋಪಿಸಿದರು.