ಟ್ರಿನಿಡಾಡ್: ವೆಸ್ಟ್ ಇಂಡೀಸ್ ಸರಣಿಯಲ್ಲಿ ರನ್ ಸುರಿಮಳೆ ಸುರಿಸುತ್ತಿರುವ ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್, ಬ್ಯಾಟರ್ ಇಶಾನ್ ಕಿಶನ್ ಸರಣಿಯ 3 ಪಂದ್ಯಗಳಲ್ಲೂ ಅರ್ಧಶತಕ ಸಿಡಿಸಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟಿದ್ದಲ್ಲದೆ, ದಿಗ್ಗಜರಿರುವ ಎಲೈಟ್ ಗುಂಪಿಗೆ ಸೇರ್ಪಡೆಗೊಂಡಿದ್ದಾರೆ.
ವೆಸ್ಟ್ ಇಂಡೀಸ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ್ದ ಇಶಾನ್ ಕಿಶನ್, ಬಾರ್ಬಡೋಸ್ ನಲ್ಲಿ ನಡೆದ ಆರಂಭಿಕ 2 ಪಂದ್ಯಗಳಲ್ಲಿ 52 ಹಾಗೂ 55 ರನ್ ಸಿಡಿಸಿ ಗಮನ ಸೆಳೆದಿದ್ದರು.ಟ್ರಿನಿಡಾಡ್ ನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲೂ ಸಿಡಿಲಬ್ಬರದ ಬ್ಯಾಟ್ ಮಾಡಿದ ಯುವ ವಿಕೆಟ್ ಕೀಪರ್, 5 ಬೌಂಡರಿ, 2 ಸಿಕ್ಸರ್ ಸಹಿತ 43 ಎಸೆತಗಳಲ್ಲೇ ಫಿಫ್ಟಿ ಬಾರಿಸುವ ಮೂಲಕ 3 ಪಂದ್ಯಗಳ ಏಕದಿನ ಸರಣಿಯ ಎಲ್ಲ ಪಂದ್ಯಗಳಲ್ಲೂ ಅರ್ಧಶತಕ ಸಿಡಿಸಿದ ಟೀಮ್ ಇಂಡಿಯಾದ 6ನೇ ಆಟಗಾರ ಎಂಬ ದಾಖಲೆ ನಿರ್ಮಿಸಿ, ಕ್ರಿಕೆಟ್ ದಿಗ್ಗಜರಾದ ಎಂಎಸ್ ಧೋನಿ, ಕೃಷ್ಣಾಮಚಾರಿ ಶ್ರೀಕಾಂತ್, ದಿಲೀಪ್ ವೆಂಗ್ಸರ್ಕರ್ ಇರುವ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
ಟೀಮ್ ಇಂಡಿಯಾ ಪರ 3 ಪಂದ್ಯಗಳ ಏಕದಿನ ಸರಣಿಯ ಎಲ್ಲ ಪಂದ್ಯಗಳಲ್ಲೂ ಫಿಫ್ಟಿ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆಯನ್ನು ವಿಶ್ವಕಪ್ ವಿಜೇತ ಆಟಗಾರ ಕ್ರಿಸ್ ಶ್ರೀಕಾಂತ್ ನಿರ್ಮಿಸಿದ್ದಾರೆ. ಶ್ರೀಕಾಂತ್ 1982 ರಲ್ಲಿ ಶ್ರೀಲಂಕಾ ವಿರುದ್ಧ ನಡೆದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಈ ಮೈಲುಗಲ್ಲು ಸ್ಥಾಪಿಸಿದ್ದಾರೆ. ಟೀಮ್ ಇಂಡಿಯಾದ ಮಾಜಿ ನಾಯಕರಾದ ದಿಲೀಪ್ ವೆಂಗ್ಸರ್ಕರ್(1983) ಹಾಗೂ ಮೊಹಮ್ಮದ್ ಅಝರುದ್ದೀನ್ (1993) ಶ್ರೀಲಂಕಾ ವಿರುದ್ಧ ಈ ದಾಖಲೆ ನಿರ್ಮಿಸಿದ್ದಾರೆ.
ಭಾರತ ತಂಡಕ್ಕೆ ಎಲ್ಲ ಸ್ವರೂಪದ ಟ್ರೋಫಿ ಗೆದ್ದುಕೊಟ್ಟಿರುವ ಮಹೇಂದ್ರ ಸಿಂಗ್ ಧೋನಿ, 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಸರಣಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿ ಹ್ಯಾಟ್ರಿಕ್ ಫಿಫ್ಟಿ ಸಿಡಿಸಿದ್ದರೆ, ಭಾರತ ತಂಡದ ಯುವ ಆಟಗಾರ ಶ್ರೇಯಸ್ ಅಯ್ಯರ್, 2019 ರಲ್ಲಿ ನ್ಯೂಜಿಲೆಂಡ್ ಸರಣಿಯಲ್ಲಿ ಈ ದಾಖಲೆ ಬರೆದಿದ್ದಾರೆ.