ನವದೆಹಲಿ: ತಮ್ಮ ಪ್ರವಾಸದ ವೇಳೆ ವೆಸ್ಟ್ ಇಂಡೀಸ್ (West Indies) ಕ್ರಿಕೆಟ್ ಮಂಡಳಿ ಮೂಲಭೂತ ವ್ಯವಸ್ಥೆಗಳನ್ನು ಒದಗಿಸಿಲ್ಲ ಎಂದು ಟೀಂ ಇಂಡಿಯಾ (eam India) ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಆರೋಪಿಸಿದ್ದಾರೆ.
ಹಾರ್ದಿಕ್ ಕ್ರೀಡಾಂಗಣವನ್ನು ಅತ್ಯುತ್ತಮವಾದ ಸ್ಥಳಗಳಲ್ಲಿ ಒಂದಾಗಿದೆ ಎಂದಿದ್ದಾರೆ. ಆದರೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ನ್ಯೂನತೆಗಳನ್ನು ಇದೇ ವೇಳೆ ಎತ್ತಿ ತೋರಿಸಿದ್ದಾರೆ. ಕ್ರಿಕೆಟ್ ಮಂಡಳಿ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಲ್ಲ. ಭವಿಷ್ಯದಲ್ಲಿ ಆತಿಥೇಯರು ಈ ಬಗ್ಗೆ ಎಚ್ಚರವನ್ನು ಹೊಂದಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸಾಮಾನ್ಯ ವ್ಯವಸ್ಥೆಗಳನ್ನು ಮಾಡದ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ವಿರುದ್ಧ ಭಾರತ ಏಕದಿನ ಕ್ರಿಕೆಟ್ ತಂಡದ ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ಗುಡುಗಿದ್ದಾರೆ. ಇಲ್ಲಿನ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ ಸ್ಟೇಡಿಯಂನಲ್ಲಿ ಮಂಗಳವಾರ (ಆಗಸ್ಟ್ 1) ನಡೆದ ಏಕದಿನ ಕ್ರಿಕೆಟ್ ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಅಧಿಕಾರಯುತ ಆಟವಾಡಿದ ಹಾರ್ದಿಕ್ ಪಾಂಡ್ಯ ಸಾರಥ್ಯದ ಭಾರತ ತಂಡ 200 ರನ್ಗಳ ಭಾರಿ ಅಂತರದಲ್ಲಿ ಆತಿಥೇಯರನ್ನು ಬಗ್ಗುಬಡಿದು, 2-1 ಅಂತರದಲ್ಲಿ ಸರಣಿ ಗೆದ್ದುಕೊಂಡಿತು.
“ನಾವು ಆಡಿದ ಅತ್ಯುತ್ತಮ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಇದೂ ಒಂದು. ಮುಂದಿನ ಬಾರಿ ನಾವು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಾಗ ಪರಿಸ್ಥಿತಿಗಳು ಮತ್ತಷ್ಟು ಸುಧಾರಿಸಿರುತ್ತವೆ ಎಂದು ಭಾವಿಸುತ್ತೇನೆ. ಪ್ರಯಾಣದಿಂದ ಹಿಡಿದು ಎಲ್ಲ ಸಂಗತಿಗಳನ್ನು ನಿಭಾಯಿಸುವ ಕಡೆಗೆ ಸಾಕಷ್ಟು ಸುಧಾರಣೆ ಆಗಬೇಕಿದೆ. ಕಳೆದ ಪ್ರವಾಸದಲ್ಲಿಯೂ ಹಲವು ಸಮಸ್ಯೆಗಳು ಎದುರಾಗಿದ್ದವು,” ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗೆ ಎಚ್ಚೆತ್ತುಕೊಳ್ಳಲು ಇದು ಸರಿಯಾದ ಸಮಯ. ಇಲ್ಲಿಗೆ ಪ್ರಯಾಣ ಬೆಳೆಸುವ ತಂಡಗಳನ್ನು ಉತ್ತಮವಾಗಿ ನಡೆಸಿಕೊಳ್ಳುವ ಅಗತ್ಯವಿದೆ. ನಾವಿಲ್ಲಿ ಐಶಾರಾಮಿ ಆತಿಥ್ಯ ಎದುರು ನೋಡುತ್ತಿಲ್ಲ. ಬದಲಿಗೆ ಸರಳ ಮತ್ತು ಸಾಮಾನ್ಯ ಸಂಗತಿಗಳ ವ್ಯವಸ್ಥೆ ಆಗುವ ಅಗತ್ಯವಿದೆ. ಉಳಿದಂತೆ ಇಲ್ಲಿ ಬಂದು ಆಡುವುದರ ಸಂತಸ ಹೆಚ್ಚಿದೆ,” ಎಂದಿದ್ದಾರೆ.