ಟ್ರಿನಿಡಾಡ್: ವೆಸ್ಟ್ ಇಂಡೀಸ್ ಸರಣಿಯಲ್ಲಿ ದೊಡ್ಡ ಮೊತ್ತ ಗಳಿಸುವಲ್ಲಿ ಎಡವಿದ್ದ ಟೀಮ್ ಇಂಡಿಯಾದ ಯುವ ಆಟಗಾರ ಶುಭಮನ್ ಗಿಲ್, ಟ್ರಿನಿಡಾಡ್ ನ ಬ್ರಿಯನ್ ಲಾರಾ ಕ್ರೀಡಾಂಗಣದಲ್ಲಿ ನಡೆದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 85 ರನ್ ಬಾರಿಸಿ ಸರಣಿಯ ಮೊದಲ ಅರ್ಧಶತಕ ಸಿಡಿಸಿ ಪಾಕಿಸ್ತಾನದ ಆರಂಭಿಕ ಬ್ಯಾಟರ್ ಇಮಾಮ್ ಉಲ್ ಹಕ್ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ.
ಸರಣಿ ಗೆಲ್ಲಲು ನಿರ್ಣಾಯಕ ಆಗಿದ್ದ ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಟೀಮ್ ಇಂಡಿಯಾ ಪರ ಯುವ ಆರಂಭಿಕರಾದ ಇಶಾನ್ ಕಿಶನ್ (77 ರನ್, 8X4,3X6) ಹಾಗೂ ಶುಭಮನ್ ಗಿಲ್ (85 ರನ್, 11X4) 143 ರನ್ ಜೊತೆಯಾಟ ನೀಡಿದರು. ಸರಣಿಯಲ್ಲಿ ಇಶಾನ್ ಕಿಶನ್ ಹ್ಯಾಟ್ರಿಕ್ ಫಿಫ್ಟಿ ಸಿಡಿಸಿ ವಿಶೇಷ ದಾಖಲೆ ನಿರ್ಮಿಸಿದರೆ, ಶುಭಮನ್ ಗಿಲ್ ಶತಕ ವಂಚಿತರಾದರೂ, ಪಾಕಿಸ್ತಾನದ ಯುವ ಆಟಗಾರನ ಹೆಸರಿನಲ್ಲಿದ್ದ ದಾಖಲೆ ಮುರಿದು ಗಮನ ಸೆಳೆದರು.
ಏಕದಿನ ಸ್ವರೂಪದಲ್ಲಿ ಸ್ಫೋಟಕ ಲಯದಲ್ಲಿರುವ ಶುಭಮನ್ ಗಿಲ್, 27 ಏಕದಿನ ಪಂದ್ಯ ಅಂತ್ಯಕ್ಕೆ 62.48 ಸರಾಸರಿಯಲ್ಲಿ 1437 ರನ್ ಸಿಡಿಸಿ ಇಮಾಮ್ ಉಲ್ ಹಕ್ 4 ವರ್ಷಗಳ ಹಿಂದೆ ನಿರ್ಮಿಸಿದ್ದ ದಾಖಲೆ ಅಳಿಸಿ ಹಾಕಿದ್ದಾರೆ. ಇಮಾಮ್ 27 ಇನಿಂಗ್ಸ್ ನಲ್ಲಿ 1381 ರನ್ ಗಳಿಸಿದ್ದರು.
27 ಇನಿಂಗ್ಸ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು
* 1437 ರನ್- ಶುಭಮನ್ ಗಿಲ್ – ಭಾರತ
* 1381 ರನ್- ಇಮಾಮ್ ಉಲ್ ಹಕ್ – ಪಾಕಿಸ್ತಾನ
* 1353 ರನ್ – ರಾಸಿ ವ್ಯಾನ್ ಡೆರ್ ಡುಸೆನ್ – ದಕ್ಷಿಣ ಆಫ್ರಿಕಾ
* 1353 ರನ್- ರಯಾನ್ ಟೆನ್ ಡೆಶ್ಕಾಟೆ – ನೆದರ್ ಲ್ಯಾಂಡ್
* 1342 ರನ್- ಜೊನಾಥನ್ ಟ್ರಾಟ್ – ಇಂಗ್ಲೆಂಡ್
* 1330 ರನ್- ಬಾಬರ್ ಆಝಮ್ – ಪಾಕಿಸ್ತಾನ