ತೆಲುಗು ನಟ ನರೇಶ್ ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್ ಅಭಿನಯದ ‘ಮತ್ತೆ ಮದುವೆ’ (ತೆಲುಗಿನಲ್ಲಿ ಮಳ್ಳಿ ಪೆಳ್ಳಿ) ಸಿನಿಮಾವು ಈಚೆಗೆ ಚಿತ್ರಮಂದಿರದಲ್ಲಿ ತೆರೆಗೆ ಬಂದಿತ್ತು. ಆನಂತರ ಒಟಿಟಿಯಲ್ಲಿ ಸಿನಿಮಾವನ್ನು ರಿಲೀಸ್ ಮಾಡಿದ್ದರು ನರೇಶ್. ಆದರೆ ಈ ಬಗ್ಗೆ ತಕರಾರು ತೆಗೆದಿದ್ದ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಕೋರ್ಟ್ ಮೆಟ್ಟಿಲೇರಿದ್ದರು. ‘ನನ್ನನ್ನು ಟಾರ್ಗೆಟ್ ಮಾಡಿ ‘ಮತ್ತೆ ಮದುವೆ’ ಸಿನಿಮಾ ಮಾಡಲಾಗಿದೆ. ಈ ಸಿನಿಮಾವನ್ನು ಚಿತ್ರಮಂದಿರ ಹಾಗೂ ಒಟಿಟಿಯಲ್ಲಿ ಪ್ರದರ್ಶನ ಮಾಡಬಾರದು’ ಎಂದು ರಮ್ಯಾ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಕೇಸ್ನಲ್ಲಿ ಈಗ ನರೇಶ್ಗೆ ಸದ್ಯ ಬಿಗ್ ರಿಲೀಫ್ ಸಿಕ್ಕಿದೆ.
ರಮ್ಯಾ ರಘುಪತಿ ಅವರ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಸಿವಿಲ್ ಕೋರ್ಟ್, ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ತೀರ್ಪು ಪ್ರಕಟಿಸಿದೆ. ರಮ್ಯಾ ರಘುಪತಿ ಸಲ್ಲಿಸಿದ ಮೊಕದ್ದಮೆಯಲ್ಲಿ ಅರ್ಹತೆಗಳಿಲ್ಲ ಎಂದು ವಜಾಗೊಳಿಸಲಾಗಿದೆ. ಹೀಗಾಗಿ ಒಟಿಟಿಯಲ್ಲಿ ಮತ್ತೆ ಮದುವೆ ಸಿನಿಮಾ ಪ್ರಸಾರಕ್ಕೆ ಇದ್ದ ನಿರ್ಬಂಧಗಳು ನಿವಾರಣೆಯಾಗಿದೆ. ಈ ಸಿನಿಮಾದಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ನಟಿಸಿದ್ದರಿಂದ ಇದು ರಿಯಲ್ ಸ್ಟೋರಿಯೇ ಎಂಬ ಚರ್ಚೆಗಳು ಕೇಳಿಬಂದಿದ್ದವು.
‘ಮತ್ತೆ ಮದುವೆ’ ಸಿನಿಮಾದ ಓಟಿಟಿ ಪ್ರದರ್ಶನಕ್ಕೆ ನ್ಯಾಯಾಲಯವು ಸೂಚನೆ ನೀಡುವುದರ ಜೊತೆಗೆ ಮತ್ತೊಂದು ಕೇಸ್ನಲ್ಲೂ ನರೇಶ್ಗೆ ಜಯ ಸಿಕ್ಕಿದೆ. ತಮ್ಮ ಮನೆಗೆ ರಮ್ಯಾ ರಘುಪತಿ ಪ್ರವೇಶಿಸಬಾರದು ಎಂದು ನರೇಶ್ ಮತ್ತು ಅವರ ಕುಟುಂಬಸ್ಥರು ತಡೆಯಾಜ್ಞೆ ಮೊಕದ್ದಮೆಯನ್ನು ಸಲ್ಲಿಸಿದ್ದರು. ಅದರ ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು, ಅದನ್ನು ಅಂಗೀಕರಿಸಿದೆ. ಅಕ್ರಮವಾಗಿ ನರೇಶ್ ನಿವಾಸ ಪ್ರವೇಶಿಸದಂತೆ ರಮ್ಯಾ ರಘುಪತಿಗೆ ನಿಷೇಧ ಹೇರಿದೆ. ನರೇಶ್ ಕುಟುಂಬಸ್ಥರು ನೀಡಿರುವ ಸಾಕ್ಷ್ಯಾಧಾರದ ಮೇರೆಗೆ ರಮ್ಯಾ ರಘುಪತಿ ವಿರುದ್ಧ ನ್ಯಾಯಾಲಯವು ಈ ತೀರ್ಪನ್ನು ನೀಡಿದೆ.