ಟ್ರಿನಿಡಾಡ್ (ವೆಸ್ಟ್ ಇಂಡೀಸ್): ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 200 ಪಂದ್ಯಗಳನ್ನು ಪೂರ್ಣಗೊಳಿಸಿದ ಎರಡನೇ ತಂಡ ಎಂಬ ಸಾಧನೆಗೆ ಭಾರತ ತಂಡ ಭಾಜನವಾಗಿದೆ. ಗುರುವಾರ ಇಲ್ಲಿನ ಬ್ರಿಯಾನ್ ಲಾರಾ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲನೇ ಟಿ20 ಪಂದ್ಯ ಆಡುವ ಮೂಲಕ ಟೀಮ್ ಇಂಡಿಯಾ ಈ ನೂತನ ಮೈಲುಗಲ್ಲು ಸ್ಥಾಪಿಸಿದೆ.
ಪಾಕಿಸ್ತಾನ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 200 ಪಂದ್ಯಗಳನ್ನು ಪೂರ್ಣಗೊಳಿಸಿದ ಮೊದಲ ತಂಡವಾಗಿದೆ. 2022ರ ಸೆಪ್ಟಂಬರ್ ತಿಂಗಳಲ್ಲಿ ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ದ ಟಿ20 ಸರಣಿಯ ನಾಲ್ಕನೇ ಪಂದ್ಯ ಆಡುವ ಮೂಲಕ ಬಾಬರ್ ಆಝಮ್ ನಾಯಕತ್ವದ ಪಾಕಿಸ್ತಾನ ತಂಡ ಈ ದಾಖಲೆ ಬರೆದಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದು, ಸರಣಿಯಲ್ಲಿ 2-2 ಅಂತರದಲ್ಲಿ ಸಮಬಲ ಮಾಡಿಕೊಂಡಿತ್ತು.
ಪಾಕಿಸ್ತಾನ ತಂಡದ ರೀತಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡ, ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ತನ್ನ 200ನೇ ಪಂದ್ಯವನ್ನು ಸ್ಮರಣೀಯವಾಗಿಸಲಿದೆಯೇ ಎಂದು ಕಾದು ನೋಡಬೇಕಾಗಿದೆ. ಐಸಿಸಿ ಶ್ರೇಯಾಂಕ ತಂಡಗಳ ಪೈಕಿ ಭಾರತ ತಂಡ ಅತ್ಯುತ್ತಮ ಗೆಲುವು-ಸೋಲಿನ ಸರಾಸರಿಯನ್ನು (2.015) ಹೊಂದಿದೆ. 199 ಪಂದ್ಯಗಳ ಪೈಕಿ ಭಾರತ ತಂಡ 127 ರಲ್ಲಿ ಗೆಲುವು ಪಡೆದಿದ್ದು, 63ರಲ್ಲಿ ಸೋಲು ಅನುಭವಿಸಿದೆ. ನಾಲ್ಕು ಪಂದ್ಯಗಳು ಟೈ ಹಾಗೂ ಇನ್ನುಳಿದ 5 ಪಂದ್ಯಗಳಲ್ಲಿ ಫಲಿತಾಂಶ ಮೂಡಿ ಬಂದಿರುವುದಿಲ್ಲ.
ಪಾಕಿಸ್ತಾನ ತಂಡ ಇಲ್ಲಿಯವರೆಗೂ 223 ಅಂತಾರಾಷ್ಟ್ರೀಯ ಪಂದ್ಯಗಳನ್ನು ಪೂರ್ಣಗೊಳಿಸಿದ್ದು, ಇದರಲ್ಲಿ 134ರಲ್ಲಿ ಗೆಲುವು ಪಡೆದಿದೆ. ಪಾಕಿಸ್ತಾನ ತಂಡದ ಗೆಲುವಿನ ದಾಖಲೆಯ ಸನಿಹದಲ್ಲಿ ಟೀಮ್ ಇಂಡಿಯಾ ಇದೆ. ವಿಂಡೀಸ್ ವಿರುದ್ಧ ಟಿ20 ಸರಣಿಯ ಎಲ್ಲಾ 5 ಪಂದ್ಯಗಳಲ್ಲಿ ಗೆಲುವು ಪಡೆದರೆ, ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ಗೆಲುವಿನ ದಾಖಲೆಯನ್ನು ಹಿಂದಿಕ್ಕಲು ಇನ್ನು ಮೂರು ಪಂದ್ಯಗಳಲ್ಲಿ ಗೆಲುವು ಪಡೆಯಬೇಕಾಗುತ್ತದೆ.