ಟ್ರಿನಿಡಾಡ್: ಒತ್ತಡದ ಸಮಯದಲ್ಲಿ ದಿಟ್ಟ ಆಟವಾಡಿದ ವೆಸ್ಟ್ ಇಂಡೀಸ್ ತಂಡ ಟೀಮ್ ಇಂಡಿಯಾ ಎದುರು 4 ರನ್ಗಳ ರೋಚಕ ಗೆಲುವಿನೊಂದಿಗೆ ಐದು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯಲ್ಲಿ ಶುಭಾರಂಭ ಮಾಡಿದೆ. ಇಲ್ಲಿನ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ ಸ್ಟೇಡಿಯಂನಲ್ಲಿ 150 ರನ್ಗಳ ಗುರಿ ಪಡೆದು ಬ್ಯಾಟ್ ಮಾಡಿದ್ದ ಟೀಮ್ ಇಂಡಿಯಾ ಜಯದ ಕಡೆಗೆ ದಾಪುಗಾಲಿಟ್ಟಿತ್ತು. ಆದರೆ, ಇನಿಂಗ್ಸ್ ಮಧ್ಯದಲ್ಲಿ ತಮ್ಮ ಅನುಭವದ ಬಳಕೆ ಮಾಡಿ ಬೌಲಿಂಗ್ ಮಾಡಿದ ಮಾಜಿ ನಾಯಕ ಜೇಸನ್ ಹೋಲ್ಡರ್ ನಿರ್ಣಾಯಕ ವಿಕೆಟ್ಗಳನ್ನು ಪಡೆದು ವಿಂಡೀಸ್ ಗೆಲುವಿಗೆ ಕಾರಣರಾದರು. ಅವರ ಪರಿಶ್ರಮಕ್ಕೆ ಪಂದ್ಯಶ್ರೇಷ್ಠ ಗೌರವ ಕೂಡ ಒಲಿಯಿತು.
ಪಿಚ್ನ ಸ್ವಭಾವ ಅರಿತು ಅದಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ತಮ್ಮ ಬೌಲಿಂಗ್ ವೇಗದಲ್ಲಿ ಬದಲಾವಣೆಗಳನ್ನು ತಂದ ಜೇಸನ್ ಹೋಲ್ಡರ್, ಎಸೆದ 4 ಓವರ್ಗಳಲ್ಲಿ ಒಂದು ಮೇಡಿನ್ ಒಳಗೊಂಡಂತೆ ಕೇವಲ 19 ರನ್ ಕೊಟ್ಟು 2 ವಿಕೆಟ್ಗಳನ್ನು ಪಡೆದರು. ಅದರಲ್ಲೂ ಇನಿಂಗ್ಸ್ನ 16ನೇ ಓವರ್ನಲ್ಲಿ ಯಾವುದೇ ರನ್ ಕೊಡದೆ 2 ವಿಕೆಟ್ಗಳನ್ನು ಪಡೆದದ್ದೇ ತಂಡದ ಗೆಲುವಿಗೆ ಬಹುದೊಡ್ಡ ತಿರುವು ನೀಡಿದ ಸಂಗತಿ ಆಗಿತ್ತು ಎಂದು ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಹೋಲ್ಡರ್ ಹೇಳಿದ್ದಾರೆ. ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬಾಗಿದ್ದ ಸೂರ್ಯಕುಮಾರ್ ಯಾದವ್ (21) ಮತ್ತು ಹಾರ್ದಿಕ್ ಪಾಂಡ್ಯ (19) ಇಬ್ಬರನ್ನೂ ಔಟ್ ಮಾಡುವಲ್ಲಿ ಹೋಲ್ಡರ್ ಯಶಸ್ವಿಯಾದರು.
“ಎರಡು ವಿಕೆಟ್ ಸಿಕ್ಕ ಆ ಮೇಡಿನ್ ಓವರ್ ಪಂದ್ಯದ ದಿಕ್ಕನ್ನೇ ಬದಲಾಯಿಸಿತು. ಇನ್ನು ಇಲ್ಲಿನ ಸ್ಥಿತಿಗತಿಗಳು ಕಷ್ಟವಿದ್ದ ಕಾರಣ ನಮ್ಮಿಂದಲೂ ದೊಡ್ಡ ಸ್ಕೋರ್ ಬಂದಿರಲಿಲ್ಲ. ಹೀಗಾಗಿ ಗುರಿ ಮುಟ್ಟಲು ಭಾರತ ತಂಡ ಕಷ್ಟ ಪಡುವಂತೆ ಮಾಡುವುದು ನಮ್ಮ ಯೋಜನೆ ಆಗಿತ್ತು,” ಎಂದು ಹೋಲ್ಡರ್ ಹೇಳಿಕೊಂಡಿದ್ದಾರೆ. 16ನೇ ಓವರ್ನ ಮೊದಲ ಎಸೆತದಲ್ಲೇ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಹೋಲ್ಡರ್ ಕ್ಲೀನ್ ಬೌಲ್ಡ್ ಮಾಡಿದರು. ಬಳಿಕ ಇಲ್ಲದ ರನ್ ಕದಿಯುವ ಆತುರದಲ್ಲಿ ಸಂಜು ಸ್ಯಾಮ್ಸನ್ (12) ರನ್ಔಟ್ ಆದರು. ಇದು ಭಾರತದ ಪಾಲಿಗೆ ನುಂಗಲಾರದ ತುತ್ತಾಗಿ, ಸೋಲಿಗೆ ಬಹುದೊಡ್ಡ ಕಾರಣವಾಯಿತು.