ಚೆನ್ನೈ: ನಾಯಕ ಹರ್ಮನ್ ಪ್ರೀತ್ ಸಿಂಗ್ ಹಾಗೂ ಮುಂಚೂಣಿ ಆಟಗಾರ ವರುಣ್ ಕುಮಾರ್ ಗಳಿಸಿದ ತಲಾ ಎರಡೆರಡು ಗೋಲುಗಳ ನೆರವಿನಿಂದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಆರಂಭಿಕ ಪಂದ್ಯದಲ್ಲೇ ಚೀನಾವನ್ನು 7-2 ಗೋಲುಗಳ ಅಂತರದಿಂದ ಮಣಿಸಿದ ಭಾರತ ಶುಭಾರಂಭ ಮಾಡಿದೆ.
ಮೇಯರ್ ರಾಧಾಕೃಷ್ಣ ಕ್ರೀಡಾಂಗಣದಲ್ಲಿ ಗುರುವಾರ (ಆಗಸ್ಟ್ 3) ನಡೆದ ಪಂದ್ಯದಲ್ಲಿ ನಾಯಕನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ತೋರಿದ ಹರ್ಮನ್ ಪ್ರೀತ್ ಸಿಂಗ್ (5ನಿಮಿಷ, 8 ನಿಮಿಷ) , ವರುಣ್ ಕುಮಾರ್ (19,30 ನಿಮಿಷ) ಪೆನಾಲ್ಟಿ ಕಾರ್ನರ್ ಗಳ ಲಾಭ ಪಡೆದು ಗೋಲು ಗಳಿಸಿದರೆ, ಸುಖ್ ಜೀತ್ ಸಿಂಗ್ (15 ನಿಮಿಷ), ಆಕಾಶ್ ದೀಪ್ ಸಿಂಗ್ (16ನಿಮಿಷ) ಹಾಗೂ ಮನದೀಪ್ ಸಿಂಗ್ (40 ನಿಮಿಷ) ಭಾರತದ ಗೋಲುಗಳ ಸಂಖ್ಯೆ ಹೆಚ್ಚಾಗಲು ಸಹಕರಿಸಿದರು. ಚೀನಾದ ಪರ ವೆನ್ ಹುಯಿ(18 ನಿಮಿಷ) ಹಾಗೂ ಜೀಷೆಂಗ್ ಗಾವೊ (25 ನಿಮಿಷ) ಗೋಲು ಗಳಿಸಿದರು.
ಪಂದ್ಯದ ಆರಂಭಿಕ ಕ್ಷಣದಿಂದಲೂ ಭಾರತ ತಂಡದ ಹಾಕಿ ಪಟುಗಳು ರೋಚಕ ಪ್ರದರ್ಶನ ತೋರಿದ ಪರಿಣಾಮ 5 ನಿಮಿಷದಲ್ಲೇ ಪೆನಾಲ್ಟಿ ಕಾರ್ನರ್ ಲಾಭ ಪಡೆದ ನಾಯಕ ಹರ್ಮನ್ ಪ್ರೀತ್ ಸಿಂಗ್ ಚೆಂಡನ್ನು ಎದುರಾಳಿಗಳ ಗೋಲು ಪೆಟ್ಟಿಗೆ ಸೇರಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಗೋಲು ಗಳಿಸಿದ ನಂತರ ಮತ್ತಷ್ಟು ಆಕ್ರಮಣಕಾರಿ ಆಟ ಪ್ರದರ್ಶಿಸಿದ ಹರ್ಮನ್ 3 ನಿಮಿಷಗಳ ಅಂತರದಲ್ಲೇ ಮತ್ತೊಂದು ಪೆನಾಲ್ಟಿ ಗೋಲು ಬಾರಿಸಿದರು. ಮೊದಲ ಕ್ವಾರ್ಟರ್ ನಲ್ಲಿ ಚೀನಾ ಗೋಲು ಗಳಿಸುವ ಸಾಕಷ್ಟು ಅವಕಾಶ ಪಡೆದರೂ ಭಾರತದ ರಕ್ಷಣಾತ್ಮಕ ಆಟಗಾರರು ಹಾಗೂ ಗೋಲ್ ಕೀಪರ್ ಅದಕ್ಕೆ ಆಸ್ಪದ ನೀಡಲಿಲ್ಲ. ಮೊದಲ ಕ್ವಾರ್ಟರ್ ಮುಗಿಯಲು ಇನ್ನೂ ಕೆಲವೇ ಕ್ಷಣವಿರುವಾಗ ವರುಣ್ ಬಾರಿಸಿದ ಚೆಂಡನ್ನು ಚೀನಾದ ಗೋಲ್ ಕೀಪರ್, ಗೋಲು ಪಟ್ಟಿ ಬಳಿ ತಡೆಯಲು ಯಶಸ್ಸು ಕಂಡರೂ, ಸುಖ್ ಜೀತ್ ಸಿಂಗ್ ತಮ್ಮ ಕೈಚಳಕದಿಂದ ಗೋಲು ಬಾರಿಸಿ ತಂಡಕ್ಕೆ 3-0 ಗೋಲುಗಳ ಮುನ್ನಡೆಗೆ ಸಹಕರಿಸಿದರು.