ಲಕ್ನೋ: ಅಲಹಾಬಾದ್ ಹೈಕೋರ್ಟ್ನಿಂದ (Allahabad High Court) ಆದೇಶ ಹೊರಬಿದ್ದ ಬೆನ್ನಲ್ಲೇ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ತಂಡವು ಬಿಗಿ ಭದ್ರತೆಯೊಂದಿಗೆ ಜ್ಞಾನವಾಪಿ ಮಸೀದಿಯಲ್ಲಿ (Gyanvapi Mosque) ಸರ್ವೆ ಕಾರ್ಯ ಆರಂಭಿಸಿದೆ. ಎಎಸ್ಐ ತಂಡ ಶುಕ್ರವಾರ ಬೆಳಗ್ಗೆ ಉತ್ತರ ಪ್ರದೇಶದ ವಾರಣಾಸಿಯ (Varanasi) ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಆವರಣಕ್ಕೆ ಆಗಮಿಸಿತು. ಬಿಗಿ ಭದ್ರತೆಯ ನಡುವೆ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯನ್ನು ಪ್ರಾರಂಭಿಸಿತು.
ಮಸೀದಿ ಸಂಕೀರ್ಣದ ಸಮೀಕ್ಷೆಯನ್ನು ಪ್ರಶ್ನಿಸಿ ಅಂಜುಮನ್ ಇಂಟೆಜಾಮಿಯಾ ಮಸೀದಿ ಸಮಿತಿಯ ಮನವಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದ್ದು, ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಸಮೀಕ್ಷೆ ನಡೆಸಲು ಅನುಮತಿ ನೀಡಿ ಗುರುವಾರ ಆದೇಶ ಹೊರಡಿಸಿದೆ. ಈಗ ಮತ್ತೆ ಅಲಹಾಬಾದ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಮಸೀದಿ ಸಮಿತಿಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಎಎಸ್ಐ ಅಧಿಕಾರಿಗಳು ಸೇರಿದಂತೆ ಅನೇಕರು ಸ್ಥಳಕ್ಕೆ ತಲುಪಿದ್ದಾರೆ. ಸಮೀಕ್ಷೆ ಪ್ರಾರಂಭವಾಗಿದೆ. ನಾವೂ ಒಳಗೆ ಹೋಗುತ್ತಿದ್ದೇವೆ ಎಂದು ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂ ಪರ ವಕೀಲ ಸುಭಾಷ್ ನಂದನ್ ಚತುರ್ವೇದಿ ತಿಳಿಸಿದ್ದಾರೆ.
ಹಿಂದೂ ದೇವಾಲಯವನ್ನು ನೆಲಸಮಗೊಳಿಸಿ ಮಸೀದಿ ನಿರ್ಮಿಸಲಾಗಿದೆ. ಇದನ್ನು ನಿರ್ಧರಿಸುವ ಏಕೈಕ ಮಾರ್ಗ ಮಸೀದಿಯನ್ನು ಸರ್ವೆಗೆ ಒಳಪಡಿಸುವುದು ಎಂದು ನಾಲ್ವರು ಮಹಿಳೆಯರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ವಾರಣಾಸಿ ನ್ಯಾಯಾಲಯವು ಮಸೀದಿ ಸಮೀಕ್ಷೆ ನಡೆಸಲು ಅನುಮತಿಸಿ ಜು.21 ರಂದು ಆದೇಶ ಹೊರಡಿಸಿತ್ತು. ಜುಲೈ 24 ರಂದು ಸಮೀಕ್ಷೆ ಪ್ರಾರಂಭವಾಯಿತು. ಆದರೆ ಅದನ್ನು ವಿರೋಧಿಸಿ ಮಸೀದಿ ಸಮಿತಿಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಸರ್ವೆ ಆರಂಭವಾದ ಕೆಲವೇ ಗಂಟೆಗಳಲ್ಲಿ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.