ಮಾಸ್ಕೋ (ರಷ್ಯಾ):ಕಚ್ಚಾ ಸಸ್ಯಾಹಾರ ಸೇವನೆಯ ಹವ್ಯಾಸ ಬೆಳೆಸಿಕೊಂಡು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾದ ರಷ್ಯಾದ ವೀಗನ್ ಡಯಟ್ (Vegan Diet) ಸಾಮಾಜಿಕ ಜಾಲತಾಣ ಇನ್ಫ್ಲುಯೆನ್ಸರ್ ಝನ್ನಾ ಸಮ್ಸೋನೋವಾ ಅವರ ಕುರಿತಾಗಿ ಹಲವು ವಿಚಿತ್ರ ಸಂಗತಿಗಳು ಒಂದೊಂದಾಗಿ ಬಯಲಾಗುತ್ತಿವೆ. ಅದರಲ್ಲೂ ಕಳೆದ 6 ವರ್ಷಗಳಿಂದ ಅವರು ನೀರನ್ನೇ ಕುಡಿದಿರಲಿಲ್ಲ ಅನ್ನೋ ಸಂಗತಿ ಇದೀಗ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ!
ಕಳೆದ ಒಂದು ದಶಕದಿಂದ ಸಂಪೂರ್ಣ ಸಸ್ಯಾಹಾರ ಸೇವನೆ ಮಾಡುತ್ತಿದ್ದ ಸಮ್ಸೋನೋವಾ ಅವರು, ಸಸ್ಯಾಹಾರವನ್ನು ಬೇಯಿಸದೇ ಸೇವನೆ ಮಾಡುತ್ತಿದ್ದರು. ಅದರಲ್ಲೂ ಪ್ರಮುಖವಾಗಿ ಹಣ್ಣುಗಳೇ ಅವರ ಆಹಾರವಾಗಿತ್ತು. 39 ವರ್ಷ ವಯಸ್ಸಿನ ಝನ್ನಾ ಸಮ್ಸೋನೋವಾ ಅವರ ಸಾವಿಗೆ ಹಸಿವು ಕಾರಣ ಅನ್ನೋ ವಿಚಾರ ಮರಣೋತ್ತರ ಪರೀಕ್ಷೆ ವೇಳೆ ಬಯಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ 6 ವರ್ಷಗಳಿಂದ ನಾನು ಒಂದು ಹನಿ ನೀರನ್ನೂ ಕುಡಿದಿಲ್ಲ ಎಂದು ಸಮ್ಸೋನೋವಾ ಅವರೇ ವಿಡಿಯೋ ಒಂದರಲ್ಲಿ ಹೇಳಿಕೊಂಡಿದ್ದರು. ಕಚ್ಚಾ ಸಸ್ಯಾಹಾರ ಸೇವನೆಯನ್ನು ನಿರ್ಬಂಧ ಎಂದು ನಾನು ಭಾವಿಸೋದಿಲ್ಲ. ನಾನು ಸಾಮಾನ್ಯರಿಗಿಂತಾ ತೆಳ್ಳಗಿದ್ದೇನೆ. ನಾನು ಬಯಸುವ ಆಹಾರ ಸೇವನೆಗೆ ಹಪಾಹಪಿಸುತ್ತೇನೆ. ನಾನು ಸೇವಿಸುವ ಆಹಾರವು ಶಕ್ತಿ ಕೊಡುವ ಜೊತೆಯಲ್ಲೇ ಆರೋಗ್ಯ ವರ್ಧಿಸುತ್ತದೆ. ನನ್ನ ಮಾನಸಿಕ ಸ್ಥಿತಿಯನ್ನು ಉತ್ತಮವಾಗಿಸುತ್ತೆ ಎಂದು ಸಮ್ಸೋನೋವಾ ಅವರು ವಿಡಿಯೋಗಳಲ್ಲಿ ಹೇಳಿಕೊಳ್ಳುತ್ತಿದ್ದರು.