ಇಸ್ಲಾಮಾಬಾದ್: ಆಗಸ್ಟ್ 9 ರಂದು ಪಾಕಿಸ್ತಾನದ ಸಂಸತ್ ವಿಸರ್ಜನೆ ಮಾಡುವುದಾಗಿ ಪ್ರಧಾನಿ ಶೆಹಬಾಜ್ ಷರೀಫ್ ಘೋಷಿಸಿದ್ದಾರೆ. ಸಂಸತ್ತಿನ ಕೆಳಮನೆಯ ಅವಧಿ ಮುಕ್ತಾಯಕ್ಕೆ ಇನ್ನೂ ಮೂರು ದಿನಗಳು ಬಾಕಿ ಇರುವಾಗಲೇ ವಿಸರ್ಜನೆಯ ಘೋಷಣೆ ಮಾಡಿದ್ದಾರೆ.
ವಿವಿಧ ಪಕ್ಷಗಳ ಸಂಸದರು, ನಾಯಕರ ಜತೆ ಗುರುವಾರ ನಡೆದ ಔತಣಕೂಟದ ಸಭೆಯಲ್ಲಿ ಸಮಾಲೋಚಿಸಿ ಪಿಎಂ ಷರೀಫ್, ಪ್ರಸಕ್ತ ರಾಜಕೀಯ ಬೆಳವಣಿಗೆ, ಆರ್ಥಿಕ ಸ್ಥಿತಿಗತಿ ಕುರಿತು ಚರ್ಚಿಸಿದರು. ಬಳಿಕ ಪಾಕಿಸ್ತಾನದ ಸಂಸತ್ ವಿಸರ್ಜನೆ ಮಾಡುವ ಘೋಷಣೆ ಮಾಡಿದರು ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸಂಸತ್ ವಿಸರ್ಜನೆ ಬಳಿಕ ಹಂಗಾಮಿ ಸರಕಾರದ ರಚನೆ ಕುರಿತು ಮೈತ್ರಿ ನಾಯಕರ ಜತೆ ಸಮಾಲೋಚನೆ ನಡೆಸಿರುವ ಷರೀಫ್, ಆಗಸ್ಟ್ 9 ರಂದು ಸಂಸತ್ ವಿಸರ್ಜನೆ ಸಂಬಂಧ ಅಧಿಕೃತವಾಗಿ ಅಧ್ಯಕ್ಷರಿಗೆ ಶಿಫಾರಸು ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ, ಬ್ರಿಟನ್ನಲ್ಲಿರುವ ಸೋದರ ಹಾಗೂ ಮಾಜಿ ಪ್ರಧಾನಿ ನವಾಜ್ ಷರೀಫ್ಗೆ ಮತ್ತೊಮ್ಮೆ ‘ಪಿಎಂ ಪಟ್ಟ’ ಕಟ್ಟಲು ಶೆಹಬಾಜ್ ಚುನಾವಣೆ ಮೂಲಕ ರಣತಂತ್ರ ಹೆಣೆದಿದ್ದಾರೆ ಎನ್ನಲಾಗಿದೆ.