ಉತ್ತರ ಪ್ರದೇಶ: ಕಳ್ಳತನದ ಆರೋಪ ಹೊತ್ತಿದ್ದ ಇಬ್ಬರು ಅಪ್ರಾಪ್ತ ಬಾಲಕರಿಗೆ ಅಮಾನುಷ ರೀತಿಯಲ್ಲಿ ಹಿಂಸೆ ನೀಡಿದ ಘಟನೆ ಉತ್ತರ ಪ್ರದೇಶ ರಾಜ್ಯದ ಸಿದ್ಧಾರ್ಥ ನಗರದಲ್ಲಿ ನಡೆದಿದೆ. 10 ಹಾಗೂ 15 ವರ್ಷ ವಯಸ್ಸಿನ ಬಾಲಕರನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಹಿಡಿದು ಕಟ್ಟಿ ಹಾಕಿದ ದುಷ್ಕರ್ಮಿಗಳು, ಆ ಬಾಲಕರಿಗೆ ಮೂತ್ರ ಕುಡಿಸಿದ್ದಾರೆ. ಬಾಲಕ ಗುದದ್ವಾರಕ್ಕೆ ಹಸಿರು ಮೆಣಸಿನ ಕಾಯಿ ಉಜ್ಜಿದ್ದಾರೆ. ನಂತರ ಕೆಲವು ಇಂಜೆಕ್ಷನ್ಗಳನ್ನೂ ಬಾಲಕರಿಗೆ ನೀಡಿದ್ದಾರೆ ಎನ್ನಲಾಗಿದೆ. ಯಾವ ರೀತಿಯ ರಾಸಾಯನಿಕ ವಸ್ತು ಹೊಂದಿದ್ದ ಚುಚ್ಚು ಮದ್ದು ನೀಡಲಾಗಿದೆ ಅನ್ನೋದು ಈವರೆಗೆ ತಿಳಿದು ಬಂದಿಲ್ಲ.
ಈ ಘಟನೆಯ ಸಂಬಂಧ ದುಷ್ಕರ್ಮಿಗಳು ಬಾಲಕರಿಗೆ ಕಿರುಕುಳ ನೀಡುವ ವಿಡಿಯೋ ಕೂಡಾ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಸಿರು ಮೆಣಸಿನ ಕಾಯಿಯನ್ನು ಬಾಲಕರಿಗೆ ತಿನ್ನಿಸುವ ದುಷ್ಕರ್ಮಿಗಳು, ಮೆಣಸಿನ ಕಾಯಿಯನ್ನು ಚಟ್ನಿಯಂತೆ ಮಾಡಿ ಅದನ್ನು ಬಾಟಲ್ಗೆ ತುಂಬಿಸಿ, ಆ ಬಾಟಲಿಗೆ ಮೂತ್ರ ಸುರಿಯುತ್ತಾರೆ. ನಂತರ ಅದನ್ನು ಬಾಲಕರಿಗೆ ಬಲವಂತವಾಗಿ ಕುಡಿಸುತ್ತಾರೆ. ಈ ವೇಳೆ ಯುವಕರ ಗುಂಪು ಬಾಲಕರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುವ ಆಡಿಯೋ ಕೂಡಾ ಈ ವಿಡಿಯೋದಲ್ಲಿ ಕೇಳಿ ಬರುತ್ತದೆ. ಬಳಿಕ ಬಾಲಕರಿಗೆ ಮನಬಂದಂತೆ ಥಳಿಸಲಾಗಿದೆ.
ಇದೇ ಘಟನೆಗೆ ಸಂಬಂಧಿಸಿದ ಮತ್ತೊಂದು ವಿಡಿಯೋದಲ್ಲಿ ಇಬ್ಬರು ಬಾಲಕರ ಪೈಕಿ ಓರ್ವನನ್ನು ನೆಲದ ಮೇಲೆ ಬೋರಲಾಗಿ ಮಲಗಿಸುವ ದುಷ್ಕರ್ಮಿಗಳು ಆತನ ಚಡ್ಡಿ ಬಿಚ್ಚುತ್ತಾರೆ. ಮೆಣಸಿನ ಕಾಯಿಯನ್ನು ಚಟ್ನಿಯ ರೀತಿ ಅರೆದು ಆ ಮಿಶ್ರಣವನ್ನು ಬಾಲಕನ ಗುದದ್ವಾರಕ್ಕೆ ಮೆತ್ತುತ್ತಾರೆ. ಈ ವೇಳೆ ಬಾಲಕ ನೋವಿನಿಂದ ಕಿರುಚುತ್ತಾನೆ. ಇದಾದ ಬಳಿಕ ಹಳದಿ ಬಣ್ಣದ ದ್ರವ ಪದಾರ್ಥವನ್ನು ಇಂಜೆಕ್ಷನ್ಗೆ ಹಾಕಿ ಬಾಲಕನ ದೇಹಕ್ಕೆ ಚುಚ್ಚುತ್ತಾರೆ. ಈ ಹಳದಿ ಬಣ್ಣದ ದ್ರವ ಪದಾರ್ಥದಲ್ಲಿ ಯಾವ ರಾಸಾಯನಿಕ ಮಿಶ್ರಣ ಇತ್ತು ಅನ್ನೋದು ತಿಳಿದು ಬಂದಿಲ್ಲ.