ಪಾಕಿಸ್ತಾನ: ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರನ್ನು ಬಂಧೀಖಾನೆಯಲ್ಲಿ ಯಾರಿಗೂ ಪ್ರವೇಶ ಸಿಗದಂಥಾ ಸ್ಥಳದಲ್ಲಿ ಇಡಲಾಗಿದೆ. ಶನಿವಾರವಷ್ಟೇ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪೊಲೀಸರು ಬಂದಿದ್ದರು. ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸುತ್ತಿದ್ದಂತೆಯೇ ಲಾಹೋರ್ನ ನಿವಾಸದಲ್ಲಿ ಇದ್ದ ಇಮ್ರಾನ್ ಖಾನ್ ಅವರನ್ನು ಬಂಧಿಸಿದ್ದ ಪೊಲೀಸರು, ಜೈಲಿಗೆ ರವಾನೆ ಮಾಡಿದ್ದರು.
ಪ್ರಧಾನಿಯಾಗಿದ್ದಾಗ ಸಿಕ್ಕ ಉಡುಗೊರೆಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣದಲ್ಲಿ ಇಮ್ರಾನ್ ಖಾನ್ ದೋಷಿ ಎಂದು ತೀರ್ಪು ನೀಡಲಾಗಿತ್ತು. ಅಧಿಕಾರಾವಧಿಯಲ್ಲಿ ಪ್ರಧಾನಿಗೆ ಸಿಕ್ಕ ಉಡುಗೊರೆಗಳು ಸರ್ಕಾರದ ಸ್ವತ್ತಾಗಿದ್ದು, ಅದನ್ನು ಮಾರಾಟ ಮಾಡೋದು ಭ್ರಷ್ಟಾಚಾರದ ವ್ಯಾಪ್ತಿಗೆ ಬರುತ್ತದೆ. ಇಮ್ರಾನ್ ಖಾನ್ ವಿರುದ್ಧ ಕೇಳಿ ಬಂದಿದ್ದ ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, 5 ವರ್ಷಗಳ ಕಾಲ ಚುನಾವಣೆಗಳಿಗೆ ನಿಲ್ಲೋದಕ್ಕೆ ನಿರ್ಬಂಧ ಹೇರಿದೆ.
ಶನಿವಾರ ಜೈಲು ಪಾಲಾದ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಲು ಭಾನುವಾರ ಅವರ ಪರ ವಕೀಲರು ಜೈಲಿಗೆ ತೆರಳಿದ್ದರು. ಆದರೆ, ಜೈಲು ಸಿಬ್ಬಂದಿ ಇಮ್ರಾನ್ ಖಾನ್ ಅವರ ಭೇಟಿಗೆ ವಕೀಲರಿಗೆ ಅವಕಾಶವನ್ನೇ ನೀಡಲಿಲ್ಲ ಎನ್ನಲಾಗಿದೆ. ಇಮ್ರಾನ್ ಖಾನ್ ಪರ ಕಾನೂನು ಹೋರಾಟ ಮುಂದುವರೆಸಲು, ಅವರಿಗೆ ಊಟ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ತಲುಪಿಸಲೂ ಸಾಧ್ಯವಾಗಿಲ್ಲ ಎಂದು ಇಮ್ರಾನ್ ಖಾನ್ ಪರ ವಕೀಲ ನಯೀಂ ಹೈದರ್ ಪಂಜೋಥಾ ಅವರು ಹೇಳಿದ್ದಾರೆ.