ಬೆಂಗಳೂರು: ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯಿಂದ ಹೊರಗುಳಿದು ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಟೀಮ್ ಇಂಡಿಯಾ ಅನುಭವಿ ಓಪನರ್ ರೋಹಿತ್ ಶರ್ಮಾ, ಆಗಸ್ಟ್ 30ರಂದು ಶುರುವಾಗಲಿರುವ 2023ರ ಸಾಲಿನ ಏಷ್ಯಾ ಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಮೂಲಕ ಭಾರತ ತಂಡದ ಸೇವೆಗೆ ಹಿಂದಿರುಗಲಿದ್ದಾರೆ. 2007ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ರೋಹಿತ್ ಶರ್ಮಾ, ಇದೀಗ ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ಕ್ರಿಕೆಟ್ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿರುವ ರೋಹಿತ್ ಶರ್ಮಾ, ತಮ್ಮ ವೃತ್ತಿಬದುಕಿನ 5 ಶ್ರೇಷ್ಠ ಸಮಯವನ್ನು ಹೆಸರಿಸಿದ್ದಾರೆ.
ಸ್ಪೋಟಕ ಬ್ಯಾಟಿಂಗ್ ಮತ್ತು ದೈತ್ಯ ಸಿಕ್ಸರ್ಗಳ ಮೂಲಕ ಹಿಟ್ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ರೋಹಿತ್ ಶರ್ಮಾ, 2007ರ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟರು. ಇನ್ನು ಟೆಸ್ಟ್ ಕ್ರಿಕೆಟ್ಗೆ 2013ರಲ್ಲಿ ಪದಾರ್ಪಣೆ ಮಾಡಿ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ ಸಾಧನೆ ಮೆರೆದಿದ್ದರು. ಹೀಗೆ ಹಲವಾರು ಸ್ಮರಣೀಯ ಪ್ರದರ್ಶನಗಳು ಹಿಟ್ಮ್ಯಾನ್ ಅವರಿಂದ ಹೊರಬಂದಿದೆ̤
2014-15ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಒಡಿಐ ಪಂದ್ಯದಲ್ಲಿ ಅಬ್ಬರಿಸಿದ್ದ ರೋಹಿತ್ ಶರ್ಮಾ, ವಿಶ್ವ ದಾಖಲೆಯ 264 ರನ್ ಸಿಡಿಸಿದ್ದರು. ಇದು 36 ವರ್ಷದ ಬಲಗೈ ಬ್ಯಾಟರ್ನ ಕ್ರಿಕೆಟ್ ವೃತ್ತಿಬದುಕಿನ ಬಹುದೊಡ್ಡ ಸಾಧನೆಗಳಲ್ಲಿ ಒಂದಾಗಿದೆ. ಒಡಿಐ ಕ್ರಿಕೆಟ್ ವೃತ್ತಿಬದುಕಿನಲ್ಲಿ ವಿಶ್ವ ದಾಖಲೆಯ 3 ದ್ವಿಶತಕಗಳನ್ನೂ ಬಾರಿಸಿದ್ದಾರೆ.
ರೋಹಿತ್ ಶರ್ಮಾ, ತಮ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ವೃತ್ತಿಬದುಕಿನಲ್ಲಿ ವಿಶ್ವ ದಾಖಲೆಯ 4 ಶತಕಗಳನ್ನೂ ಬಾರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಕೂಡ ರೋಹಿತ್ ಶರ್ಮಾ ಹೆಸರಲ್ಲಿದೆ.