ಜೈಪುರ: ಹೊಸದಾಗಿ ಮದುವೆಯಾದ ಜೋಡಿಯೊಂದು ಹನಿಮೂನ್ (Honeymoon) ಬಂದು, ಪತಿಯನ್ನು ಹೋಟೆಲ್ನಲ್ಲಿಯೇ ಪತ್ನಿ ಬಿಟ್ಟು ಹೋಗಿರುವ ಅಚ್ಚರಿಯ ಪ್ರಕರಣವೊಂದು ರಾಜಸ್ಥಾನದ ಜೈಪುರದಿಂದ ಬೆಳಕಿಗೆ ಬಂದಿದೆ.
ಪತಿಯೊಂದಿಗೆ ಹೋಟೆಲ್ (Hotel) ವಿಚಾರವಾಗಿ ಈಕೆ ಪತಿ ಜೊತೆ ಮುನಿಸಿಕೊಂಡಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ರಿಂಗಾಸ್ನಲ್ಲಿರುವ ಬಾಬಾ ಖತುಶ್ಯಾಮ್ ಜಿ ದೇವಸ್ಥಾನಕ್ಕೆ ಭೇಟಿ ನೀಡಲೆಂದು ವಾಹನ ಬುಕ್ ಮಾಡಲು ಪತಿ ಹೋದಾಗ ಆತನನ್ನು ಕೋಪದಿಂದ ಪತ್ನಿ ಬಿಟ್ಟು ಹೋಗಿದ್ದಾಳೆ.
ಮಧ್ಯಪ್ರದೇಶದ (Madhyapradesh) ಭೋಪಾಲ್ ಮೂಲದ ದಂಪತಿ ಜುಲೈ 29 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಬಳಿಕ ಹನುಮೂನಿಗೆಂದು ಆಗಸ್ಟ್ 5 ರಂದು ಜೈಪುರಕ್ಕೆ ಬಂದಿದ್ದು, ಚೌಮು ಪುಲಿಯಾ ಸಮೀಪದ ಹೋಟೆಲ್ನಲ್ಲಿ ತಂಗಿದ್ದರು. ಮರುದಿನ ಬೆಳಗ್ಗೆ ದಂಪತಿ ಜೈಪುರ ಸುತ್ತಾಡಿ ನಂತರ ಅಮೇರ್ ಫೋರ್ಟ್ಗೆ ಭೇಟಿ ನೀಡಿದರು.
ಸಂಜೆ 3 ಗಂಟೆ ಸುಮಾರಿಗೆ ಹೋಟೆಲ್ಗೆ ಹಿಂದಿರುಗಿದರು. ಇದಾದ ಬಳಿಕ ಅವರು ಬಾಬಾ ಖತುಶ್ಯಾಮ್ ಜಿ ದೇವಸ್ಥಾನಕ್ಕೆ ಭೇಟಿ ನೀಡಲು ಯೋಜಿಸಿದ್ದರು. ಅಂತೆಯೇ ಪತಿ ವಾಹನ ಬುಕ್ ಮಾಡಲು ತೆರಳಿದರು. ಹೀಗೆ ಹೋದವನು ವಾಪಸ್ ರೂಮಿಗೆ ಬರುವಾಗ ಪತ್ನಿ ತನ್ನ ಲಗೇಜ್ನೊಂದಿಗೆ ಕಾಣೆಯಾಗಿದ್ದಳು. ಇದನ್ನು ಕಂಡ ಪತಿ ದಿಗ್ಭ್ರಮೆಗೊಂಡನು.
ಆಕೆಗಾಗಿ ಇಡೀ ಹೋಟೆಲ್ನಲ್ಲಿ ಹುಡುಕಾಟ ನಡೆಸಿದನು. ಎಲ್ಲಯೂ ಸಿಗದೇ ಇದ್ದಾಗ ಆಕೆಯ ಮೊಬೈಲ್ ನಂಬರಿಗೆ ಕರೆ ಮಾಡಿದ್ದಾನೆ. ಆದರೆ ಆಕೆ ಕರೆ ಸ್ವೀಕರಿಸುತ್ತಿರಲಿಲ್ಲ. ಬಳಿಕ ಅವರು ಹೋಟೆಲ್ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರು. ಈ ವೇಳೆ ಆಕೆ ಫೋನ್ನಲ್ಲಿ ಮಾತನಾಡುತ್ತಾ ಹೋಟೆಲ್ನಿಂದ ಹೊರಟು ಹೋಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪತಿ ಝೋತ್ವಾರಾ ಪೊಲೀಸ್ ಠಾಣೆಯಲ್ಲಿ ಪತ್ನಿ ನಾಪತ್ತೆಯಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.