ಹೊಸದಿಲ್ಲಿ: ತಾವು ಎದುರಿಸಿದ ಪಾಕಿಸ್ತಾನ ಕ್ರಿಕೆಟ್ ತಂಡದ ಅತ್ಯಂತ ಕಠಿಣ ವೇಗದ ಬೌಲರ್ ಯಾರೆಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಪತ್ರಕರ್ತರೊಬ್ಬರು ಪ್ರಶ್ನೆಯನ್ನು ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಹಿಟ್ಮ್ಯಾನ್ ಖ್ಯಾತಿಯ ರೋಹಿತ್, ಹಾಸ್ಯಾಸ್ಪದ ಉತ್ತರವನ್ನು ನೀಡಿ ಜಾರಿಕೊಂಡರು.
ಇತ್ತೀಚೆಗೆ ರೋಹಿತ್ ಶರ್ಮಾ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಇವರ ಪತ್ನಿ ರಿತಿಕಾ ಕೂಡ ಭಾಗವಹಿಸಿದ್ದರು. ಎಲ್ಲರ ಸಮ್ಮುಖದಲ್ಲಿ ಸುದ್ದಿಗಾರರೊಬ್ಬರು, ನೀವು ಎದುರಿಸಿದ ಪಾಕಿಸ್ತಾನದ ಅತ್ಯಂತ ಕಠಿಣ ವೇಗದ ಬೌಲರ್ ಯಾರೆಂದು ಪ್ರಶ್ನೆ ಕೇಳಿದರು. ಇದಕ್ಕೆ ರೋಹಿತ್ ಶರ್ಮಾ ಕೊಟ್ಟ ಬುದ್ದಿವಂತಿಕೆಯ ಉತ್ತರಕ್ಕೆ ಎಲ್ಲರೂ ನಕ್ಕರು.
“ಪಾಕಿಸ್ತಾನ ಕ್ರಿಕೆಟ್ ತಂಡದ ಎಲ್ಲಾ ಬೌಲರ್ಗಳು ಅತ್ಯುತ್ತಮವಾಗಿದ್ದಾರೆ. ಆದರೆ, ಯಾರೊಬ್ಬರ ಹೆಸರನ್ನು ನಾನು ಇದೀಗ ತೆಗೆದುಕೊಳ್ಳುವುದಿಲ್ಲ. ಒಂದು ವೇಳೆ ನಾನು ಒಬ್ಬರ ಹೆಸರನ್ನು ಹೇಳಿದರೆ, ಅದು ದೊಡ್ಡ ವಿವಾದಕ್ಕೆ ಕಾರಣವಾಗಬಹುದು,” ಎಂದು ರೋಹಿತ್ ಶರ್ಮಾ ಹೇಳುತ್ತಿದ್ದಂತೆ ಮುಂದಿನ ಸಾಲಿನಲ್ಲಿ ಕುಳಿತಿದ್ದ ರಿತಿಕಾ ಸೇರಿದಂತೆ ಸಭಿಕರು ನಕ್ಕರು.
ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 2007ರಲ್ಲಿ ಜೈಪುರದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧವೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಇಲ್ಲಿಯವರೆಗೂ ಪಾಕಿಸ್ತಾನ ತಂಡದ ವಿರುದ್ದ ಒಡಿಐ ಕ್ರಿಕೆಟ್ನಲ್ಲಿ ರೋಹಿತ್ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ.