ನಾಗರಕೋಯಿಲ್; ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಅಂಜುಗ್ರಾಮಮ್ನಲ್ಲಿ ತಾಯಿಯೊಬ್ಬಳು ತನ್ನ ಮಕ್ಕಳಿಬ್ಬರ ಮನವೊಲಿಸಿ ಅವರೊಂದಿಗೆ ಸಾವಿನ ಹಾದಿ ಹಿಡಿದಿರುವ ಹೃದಯ ವಿದ್ರಾವಕ ಘಟನೆ ಜರುಗಿದೆ.
ತಾಯಿ ಅನಿತಾ, ಪುತ್ರಿಯರಾದ ಸಹಾಯಾ ದಿವ್ಯಾ, ಮತ್ತು ಸಹಾಯಾ ಪೂಜಾ ಮೃತರು. ಯೇಸುದಾಸನ್ ಅವರು ಗಲ್ಫ್ ದೇಶದಲ್ಲಿ ಕೆಲಸ ಮಾಡುತ್ತಿರುವಾಗ 10 ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ಬಳಿಕ ಇಡೀ ಕುಟುಂಬದ ಜವಾಬ್ದಾರಿಯನ್ನು ಅನಿತಾ ಹೊತ್ತುಕೊಂಡಿದ್ದರು. ಆದಾದ್ಯೂ, ತನ್ನ ಗಂಡನ ಅಕಾಲಿಕ ಮರಣದ ಆಘಾತದಿಂದ ಉಂಟಾದ ಅನೇಕ ಆತಂಕದ ದಾಳಿಗಳಿಂದ ಅನಿತಾ ಅವರು ನಿರಂತರವಾಗಿ ಬಳಲುತ್ತಿದ್ದರು.
ಅನಿತಾ ಅವರ ಹಿರಿಯ ಮಗಳು ದಿವ್ಯಾ, ಡಿಗ್ರಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿದ್ದರೆ, ಎರಡನೆಯವಳಾದ ಪೂಜಾ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು. ಗುರುವಾರ ಬೆಳಗ್ಗೆ ಹಲವು ಗಂಟೆಗಳ ನಂತರವೂ ಮನೆಯ ಎಲ್ಲ ಬಾಗಿಲುಗಳು ಮುಚ್ಚಿರುವುದನ್ನು ಗಮನಿಸಿದ ಸ್ಥಳೀಯರಿಗೆ ಅನುಮಾನ ಮೂಡಿತು. ಬಳಿಕ ಮನೆಯ ಕಿಟಕಿಗಳನ್ನು ನೋಡಿದಾಗ ಮೂವರ ಮೃತದೇಹಗಳು ಮನೆಯ ಚಾವಣಿಯಲ್ಲಿ ನೇತಾಡುತ್ತಿರುವುದನ್ನು ಕಂಡು ನೆರೆಹೊರೆಯವರೇ ಆಘಾತಕ್ಕೆ ಒಳಗಾದರು.
ತಕ್ಷಣ ಈ ಮಾಹಿತಿಯನ್ನು ಅಂಜುಗ್ರಾಮಮ್ ಪೊಲೀಸರಿಗೆ ತಿಳಿಸಲಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹಗಳನ್ನು ಅಸರಿಪಲ್ಲಮ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ.