ಬ್ಯಾಂಕಾಕ್: ಆಮೆಯೊಂದರ ಹೊಟ್ಟೆಯಿಂದ 915 ನಾಣ್ಯಗಳನ್ನು ಹೊರತೆಗೆಯುವಲ್ಲಿ ಥೈಲ್ಯಾಂಡ್ನ ಪಶುವೈದ್ಯರು ಯಶಸ್ವಿಯಾಗಿದ್ದಾರೆ. 25 ವರ್ಷದ ಓಮ್ಸಿನ್ ಹೆಸರಿನ ಆಮೆಗೆ 7 ಗಂಟೆಗಳ ಕಾಲ ಸರ್ಜರಿ ಮಾಡಿ 5 ಕೆಜಿ ತೂಕದ ನಾಣ್ಯಗಳನ್ನ ಹೊರತೆಗೆದಿದ್ದಾರೆ.
ಆಮೆಯ ಮೇಲ್ಮೈನ ಚಿಪ್ಪಿನಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಅದನ್ನು ಪಶುವೈದ್ಯರ ಬಳಿ ತೆಗೆದುಕೊಂಡು ಹೋಗಲಾಗಿತ್ತು, ವೈದ್ಯರು ಆಮೆಯ ಎಕ್ಸ್ರೇ ತೆಗೆದು ನೋಡಿದಾಗ ಅದರ ಹೊಟ್ಟೆಯಲ್ಲಿ ನಾಣ್ಯಗಳಿದ್ದಿದ್ದು ಗೊತ್ತಾಯ್ತು. ಆಮೆಯ ಹೊಟ್ಟೆಯಲ್ಲಿ 915 ನಾಣ್ಯಗಳಿದ್ದವು. ಅವನ್ನು ಒಂದೊಂದಾಗಿ ಹೊರತೆಗೆದಿದ್ದೇವೆ ಎಂದು ತಿಳಿಸಿರೋ ವೈದ್ಯರು ಈ ರೀತಿಯ ಸರ್ಜರಿ ಮಾಡಿದ್ದು ಇದೇ ಮೊದಲು ಎಂದಿದ್ದಾರೆ.
ಆಮೆಯ ಹೊಟ್ಟೆಗೆ ನಾಣ್ಯ ಹೋಗಿದ್ದು ಹೇಗೆ?: ಈ ಆಮೆ ಇಲ್ಲಿನ ಚೋನ್ಬುರಿ ಪ್ರಾಂತ್ಯದಲ್ಲಿರುವ ಚಿಕ್ಕ ಪಾರ್ಕ್ವೊಂದರ ಕೊಳದಲ್ಲಿ ಎರಡು ದಶಕಗಳಿಂದ ಜೀವಿಸುತ್ತಿದೆ. ಇಲ್ಲಿಗೆ ಬರುವ ಜನ ಕೊಳಕ್ಕೆ ನಾಣ್ಯಗಳನ್ನ ಎಸೆದು ಅದೃಷ್ಟ ಬರಲಿ/ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳುವ ರೂಢಿಯಿದೆ. ಹೀಗೆ ಕೊಳಕ್ಕೆ ಬಿದ್ದ ನಾಣ್ಯಗಳನ್ನ ಆಮೆ ನುಂಗಿದ್ದು ಅದರ ಹೊಟ್ಟೆಯಲ್ಲಿದ್ದ ಒಟ್ಟು 915 ನಾಣ್ಯಗಳನ್ನು ಈಗ ಹೊರತೆಗೆಯಲಾಗಿದೆ.
ಆಮೆಗಳು ಕನಿಷ್ಠ ಎಂದರೂ 80 ವರ್ಷಗಳ ಕಾಲ ಬದುಕುತ್ತವೆ. ಹೀಗಾಗಿ ಆಮೆಗಳಿರುವ ಕೊಳಕ್ಕೆ ನಾಣ್ಯ ಎಸೆಯುವವರು ದೀರ್ಘ ಕಾಲ ಬದುಕುತ್ತಾರೆ ಎಂಬ ನಂಬಿಕೆಯಿದೆ. ಆದ್ರೆ ನಾಣ್ಯ ಎಸೆಯುವುದು ಪ್ರಾಣಿ ಹಿಂಸೆ ಎಂದು ಚೌಲಾಲೊಂಗ್ಕೊರ್ನ್ನ ಪಶು ವಿಜ್ಞಾನ ವಿಭಾಗದ ಡೀನ್ ರುಂಗ್ರೊಜ್ ಹೇಳಿದ್ದಾರೆ.