ಲಂಡನ್: ನೀವು ಸಿಕ್ಕಾಪಟ್ಟೆ ಒತ್ತಡದಲ್ಲಿದ್ದೀರಾ? ಒತ್ತಡ ಕಡಿಮೆ ಮಾಡಲು ನಾನಾ ತಂತ್ರ ಮಾಡ್ತಾ ಇದ್ದೀರಾ? ಹಾಗಾದ್ರೆ ನಿಮಗೆ ಇಲ್ಲಿದೆ ಸುಲಭದ ಉಪಾಯ. ಆಲೂಗೆಡ್ಡೆಯ ಸಿಪ್ಪೆಯನ್ನು ಸುಲಿದರೆ ನಿಮ್ಮ ಒತ್ತಡ ಕಡಿಮೆಯಾಗುತ್ತಂತೆ. ಹೌದು, ಇಂಗ್ಲೆಂಡಿನ ಲಂಡನ್ ನಗರದಲ್ಲಿರುವ ಪ್ರಸಿದ್ಧ ಅಂಗಡಿಯೊಂದು ಜನರಿಗೆ ಆಲೂಗೆಡ್ಡೆಯ ಸಿಪ್ಪೆಯನ್ನು ಸುಲಿಯುವುದು ಹೇಗೆ ಎನ್ನುವ ಪಾಠವನ್ನು ಹೇಳಿಕೊಡುತ್ತಿದ್ದು, ಸಕತ್ ಕ್ಲಿಕ್ ಆಗಿದ್ದು ವಿದೇಶಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ.
ಡಬ್ ಆವರ್ ಹೆಸರಿನಲ್ಲಿ ಆಲೂಗೆಡ್ಡೆ ಸಿಪ್ಪೆ ಸುಲಿಯುವ ವಿಶಿಷ್ಟ ಕಾರ್ಯಕ್ರಮವನ್ನು ಅಂಗಡಿಯೊಂದು ಆಯೋಜಿಸಿದೆ. ಜನರಲ್ಲಿ ಒತ್ತಡ ಕಡಿಮೆ ಮಾಡಲು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದಾಗಿ ಅಂಗಡಿ ತಿಳಿಸಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಸಿಪ್ಪೆಯನ್ನು ಸುಲಭವಾಗಿ ಸುಲಿಯಲು ಪ್ರಸ್ತುತ ಮಾರುಕಟ್ಟೆಯಲ್ಲಿ ಸಿಗುವ ಸಾಧನಗಳನ್ನು ನೀಡಲಾಗುತ್ತಿಲ್ಲ. ಬದಲಾಗಿ ಕಷ್ಟಪಟ್ಟು ಸುಲಿಯಲೆಂದೇ ಜನರಿಗೆ ಇಲ್ಲಿ ಚಾಕು ನೀಡಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದು, ನಾವು ಹುಟ್ಟಿದ ಬಳಿಕ ಇದೂವರೆಗೂ ಆಲೂಗೆಡ್ಡೆಯ ಸಿಪ್ಪೆಯನ್ನು ಸುಲಿದಿಲ್ಲ. ಈಗ ನನಗೆ ಬಹಳ ಸಂತೋಷವಾಗುತ್ತಿದೆ. ಸಿಪ್ಪೆ ಸುಲಿಯುವುದರಿಂದ ನನಗೆ ಧ್ಯಾನ ಮಾಡಿದಷ್ಟೇ ಅನುಭವ ಆಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, ಆಲೂಗೆಡ್ಡೆ ಸುಲಿಯವುದು ಎಷ್ಟು ಖುಷಿ ನೀಡಿದೆ ಎಂದರೆ ಈಗ ಇಮೇಲ್ ಚೆಕ್ ಮಾಡುವುದೇ ಮರೆತು ಹೋಗಿದೆ ಎಂದು ತಮಗೆ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.