ಚೆನ್ನೈ: ಶಾಲಾ ಬಾಲಕಿ ಮೇಲೆ ಹಸುವೊಂದು ಭಯಾನಕವಾಗಿ ದಾಳಿ ಮಾಡಿರುವ ಘಟನೆ ತಮಿಳುನಾಡಿನಲ್ಲಿ (Tamilnadu) ನಡೆದಿದೆ. ಗಾಯಗೊಂಡ ಬಾಲಕಿಯನ್ನು ಆಯಿಷಾ (9) ಎಂದು ಗುರುತಿಸಲಾಗಿದೆ. ಸದ್ಯ ಈಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ. ಹಸು ದಾಳಿ ಮಾಡುವ ದೃಶ್ಯವು ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ವೀಡಿಯೋದಲ್ಲೇನಿದೆ..?: ಆಯಿಷಾ ಬುಧವಾರ ಸಂಜೆ ಶಾಲೆಯಿಂದ ಮನೆಯ ಕಡೆ ಹೆಜ್ಜೆ ಹಾಕುತ್ತಿದ್ದಳು. ಈ ವೇಳೆ ಅದೇ ದಾರಿಯಲ್ಲಿ ಹಸುಗಳು ಹೋಗುತ್ತಿದ್ದವು. ಇತ್ತ ಆಯಿಷಾ ತನ್ನ ಪಾಡಿಗೆ ತಾನು ಹೋಗುತ್ತಿದ್ದಾಗ ಹಿಂದಿರುಗಿ ಬಂದ ಹಸುವೊಂದು ಬಾಲಕಿ ಮೇಲೆ ದಾಳಿ (Cow Attack) ಮಾಡಿದೆ. ತನ್ನ ಕೊಂಬಿನಿಂದ ಬಾಲಕಿಯನ್ನು ಎತ್ತಿ ಬಿಸಾಕಿದೆ. ಇಷ್ಟು ಮಾತ್ರವಲ್ಲದೆ ನೆಲಕ್ಕೆ ಬಿದ್ದ ಬಾಲಕಿಯನ್ನೂ ಬಿಡದೆ ಕಾಲುಗಳಿಂದ ಒದ್ದು, ಕೊಂಬಿನಿಂದ ತಿವಿದು ರಂಪಾಟ ಮಾಡಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಇತ್ತ ಬಾಲಕಿಯ ಚೀರಾಟ ಕೂಗಾಟ ಕೇಳಿ ಸ್ಥಳೀಯರು ಓಡಿ ಬಂದು ಹಸುಗಳನ್ನು ಓಡಿಸಿ ಆಕೆಯನ್ನು ರಕ್ಷಿಸಿದ್ದಾರೆ. ನಂತರ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ವಿಡಿಯೋವನ್ನು ತಮಿಳುನಾಡು ಆರೋಗ್ಯ ಸಚಿವ ಸುಬ್ರಹ್ಮಣಿಯನ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿದರು.
ಸದ್ಯ ಪ್ರಕರಣ ಹಸುಗಳ ಮಾಲೀಕನನ್ನು ಪೊಲೀಸರು ಬಂಧಿಸಿ, ಕೇಸ್ ದಾಖಲಿಸಿದ್ದಾರೆ. ನಿರ್ಲಕ್ಷ್ಯ ಮತ್ತು ಸಾರ್ವಜನಿಕ ಜೀವಕ್ಕೆ ಅಪಾಯದ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅರುಂಬಕ್ಕಂ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಚೆನ್ನೈ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಹಸುಗಳ ಮಾಲೀಕರಿಗೆ 2,000 ದಂಡ ವಿಧಿಸಿದರು.