ವಾಷಿಂಗ್ಟನ್: ಮಹಿಳೆಯೊಬ್ಬರು ಸೆಲ್ಫಿ ತೆಗೆಯುವ ವೇಳೆ ಅಮೆರಿಕದ ಅತ್ಯಂತ ಎತ್ತರದ ಬ್ರಿಡ್ಜ್ ಗಳಲ್ಲಿ ಒಂದಾದ ಫಾರೆಸ್ಟ್ ಹಿಲ್ ಬ್ರಿಡ್ಜ್ ನಿಂದ ಕೆಳಗೆ ಬಿದ್ದರೂ ಬದುಕುಳಿದಿದ್ದಾರೆ. ಕ್ಯಾಲಿಫೋರ್ನಿಯಾದ ಅಬರ್ನ್ ಬಳಿ ಇರುವ ಈ ಬ್ರಿಡ್ಜ್ ಮೇಲೆ ಮಹಿಳೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಬ್ರಿಡ್ಜ್ನಿಂದ 60 ಅಡಿ ಕೆಳಗೆ ಕಾಲುದಾರಿಯ ಮೇಲೆ ಬಿದ್ದಿದ್ದಾರೆ.
ಫೋಟೋ ಕ್ಲಿಕ್ಕಿಸುತ್ತಿದ್ದ ವೇಳೆ ಮಹಿಳೆ ಬ್ರಿಡ್ಜ್ ಮೇಲೆ ಹಾಕಲಾಗಿದ್ದ ಬೋಲ್ಟ್ ಮೇಲೆ ಕಾಲಿಟ್ಟಿದ್ದಾರೆ. ಈ ವೇಳೆ ಸಮತೋಲನ ಕಳೆದುಕೊಂಡು ಕೆಳಗಿ ಬಿದ್ದಿದ್ದಾಗಿ ಮಹಿಳೆಯ ಸ್ನೇಹಿತರಾದ ಪಾಲ್ ಗೊನ್ಚಾರುಕ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ನಂತರ ಆಕೆಯನ್ನು ಏರ್ಲಿಫ್ಟ್ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ರಿಜ್ಡ್ ನಿಂದ ಕೆಳಗೆ ಬಿದ್ದ ನಂತರ ಮಹಿಳೆ ಪ್ರಜ್ಞೆ ತಪ್ಪಿದ್ದರು.
ಆಕೆಯ ಮೂಳೆ ಮುರಿದಿದ್ದು, ಸರ್ಜರಿ ಮಾಡಬೇಕಿದೆ ಎಂದು ಪಾಲ್ ಹೇಳಿದ್ದಾರೆ. 730 ಅಡಿ ಉದ್ದವಿರುವ ಫಾರೆಸ್ಟ್ ಹಿಲ್ ಸೇತುವೆ ಅಮೆರಿಕದ ಅತ್ಯಂತ ಎತ್ತರದ ಸೇತುವೆಗಳಲ್ಲಿ ಒಂದಾಗಿದೆ. ಇನ್ನು ಘಟನೆ ಬಗ್ಗೆ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರೋ ಕ್ಯಾಲಿಫೋರ್ನಿಯಾ ಪೊಲೀಸರು ಒಂದು ಸೆಲ್ಫಿಗಾಗಿ ಪ್ರಾಣವನ್ನೇ ಕಳೆದುಕೊಳ್ಳಬೇಡಿ ಎಂದು ಎಚ್ಚರಿಸಿದ್ದಾರೆ.