ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದ ದೆಹಲಿ ಸೇವಾ ಮಸೂದೆ, ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ, ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಮಸೂದೆ ಮತ್ತು ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅನುಮೋದನೆ ನೀಡಿದ್ದು ಹೊಸ ಕಾನೂನುಗಳಾಗಿ ಮಾರ್ಪಟ್ಟಿವೆ.
ದೆಹಲಿ ಸೇವಾ ಕಾಯ್ದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ಬಳಿಕ ಆಪ್ಗೆ ಅತಿದೊಡ್ಡ ಹಿನ್ನಡೆಯಾಗಿದೆ. ಲೋಕಸಭೆಯಲ್ಲಿ (Parliament) ಬೆಂಬಲ ಇಲ್ಲದ ಹಿನ್ನೆಲೆ ರಾಜ್ಯಸಭೆಯಲ್ಲಿ ಇದನ್ನ ತಡೆಯಲು ಆಪ್ ಸರ್ಕಾರ ಬಹಳಷ್ಟು ಪ್ರಯತ್ನಿಸಿತ್ತು, ವಿರೋಧ ಪಕ್ಷಗಳ ವಿಶ್ವಾಸ ಗಳಿಸುವ ಪ್ರಯತ್ನ ಮಾಡಿತ್ತು. ಆದಾಗ್ಯೂ ಮಸೂದೆಯ ಪರ 131 ಸದಸ್ಯರು ಬೆಂಬಲ ನೀಡಿದರು, ವಿರುದ್ಧವಾಗಿ 102 ಸಂಸದರು ಮತ ಚಲಾಯಿಸಿದ್ದರು.
ರಾಷ್ಟ್ರ ರಾಜಧಾನಿಯ ಅಧಿಕಾರಿಗಳ ಅಮಾನತು ಮತ್ತು ವಿಚಾರಣೆಗಳಂತಹ ಕ್ರಮಗಳು ಕೇಂದ್ರದ ನಿಯಂತ್ರಣದಲ್ಲಿರುತ್ತವೆ ಎಂದು ಈ ಕಾನೂನು ಪ್ರಸ್ತಾಪಿಸುತ್ತದೆ. ದೆಹಲಿಯಲ್ಲಿ ಆಡಳಿತ ಅಧಿಕಾರಗಳ ಮೇಲೆ ನಿಯಂತ್ರಣ ಹೊಂದಲು ಪ್ರಯತ್ನಿಸಿದ್ದ ಆಪ್ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿತ್ತು. ಪ್ರಕರಣದ ಸುಧೀರ್ಘ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಚುನಾಯಿತ ಸರ್ಕಾರಕ್ಕೆ ಆಡಳಿತ ಮೇಲೆ ಅಧಿಕಾರ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದ ಕೋರ್ಟ್, ಕಾನೂನು ಸುವ್ಯವಸ್ಥೆ ಮತ್ತು ಭೂಮಿಯನ್ನ ಹೊರತುಪಡಿಸಿ ಎಲ್ಲ ಆಡಳಿತದ ಮೇಲೆ ನಿಯಂತ್ರಣ ಸಾಧಿಸಲು ಅಧಿಕಾರ ನೀಡಿತ್ತು.