ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ (Akshay Kumar) ಕೆನ್ನೆಗೆ ಬಾರಿಸಿದವರಿಗೆ ಬರೋಬ್ಬರಿ ಹತ್ತು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಹಿಂದೂ ಸಂಘಟನೆಯ ಅಧ್ಯಕ್ಷ ಗೋವಿಂದ್ ಪರಾಶರ (Govind Parashara) ಹೇಳಿಕೆ ನೀಡಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ಓ ಮೈ ಗಾಡ್ 2 (Oh My God 2) ಸಿನಿಮಾದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ಮಾಡಿದ್ದಕ್ಕೆ ಗೋವಿಂದ್ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಈ ವಾರ ಅಕ್ಷಯ್ ಕುಮಾರ್ ನಟನೆಯ ಓ ಮೈ ಗಾಡ್ 2 ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಲೈಂಗಿಕತೆಯ ಬಗ್ಗೆ ಪಾಠ ಮಾಡಲಾಗಿದೆ. ಭಗವಾನ್ ಶಿವನ ಸಂದೇಶವಾಹಕನ ಪಾತ್ರದ ಮೂಲಕ ಲೈಂಗಿಕತೆಯ ಕುರಿತು ಹೇಳಿಸಲಾಗಿದೆ. ಇದು ಹಿಂದೂಗಳ ಭಾವನೆಯನ್ನು ಕೆರಳಿಸಿದೆ. ಹಾಗಾಗಿ ಸಿನಿಮಾ ರಿಲೀಸ್ ಆದ ಕೆಲವು ಕಡೆ ಪ್ರತಿಭಟನೆಯನ್ನೂ ಮಾಡಲಾಗುತ್ತಿದೆ.
ಆಗ್ರಾದ ಕೆಲವು ಚಿತ್ರಮಂದಿರಗಳ ಮುಂದೆ ಅಕ್ಷಯ್ ಕುಮಾರ್ ಅವರ ಪ್ರತಿಕೃತಿ ದಹನ ಮತ್ತು ಪೋಸ್ಟರ್ ಗಳನ್ನು ಹರಿದು ಹಾಕಲಾಗಿದೆ. ಕೂಡಲೇ ಈ ಸಿನಿಮಾವನ್ನು ಹಿಂಪಡೆಯಬೇಕು ಎಂದು ಸೆನ್ಸಾರ್ ಮಂಡಳಿಗೂ ಸಂಘಟನೆಯ ಒತ್ತಾಯಿಸಿದೆ. ಈ ಹಿಂದೆ ಚಿತ್ರಕ್ಕೆ ಸೆನ್ಸಾರ್ ಸಮಸ್ಯೆ ಎದುರಾಗಿತ್ತು. ಹಲವು ಕತ್ತರಿ ಪ್ರಯೋಗಗಳ ನಂತರ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿತ್ತು.
ಓ ಮೈ ಗಾಡ್ 2 ಚಿತ್ರಕ್ಕೆ ಅನೇಕ ಅಡೆತಡೆಗಳು ಎದುರಾದರೂ, ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿಕೊಂಡು ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಮೊನ್ನೆಯಷ್ಟೇ ಸದ್ಗುರು ಜಗ್ಗಿವಾಸುದೇವ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಆದರೆ, ಹಿಂದೂಪರ ಸಂಘಟನೆಗಳು ಈ ಚಿತ್ರದ ಬಗ್ಗೆ ತಕರಾರು ತೆಗೆದಿವೆ.