ಫ್ಲೋರಿಡಾ: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟಿ20 ಸರಣಿಯ 4ನೇ ಪಂದ್ಯದಲ್ಲಿ ಚೊಚ್ಚಲ ಅರ್ಧಶತಕ (84* ರನ್) ಬಾರಿಸಿದ ಐಪಿಎಲ್ ತಾರೆ ಯಶಸ್ವಿ ಜೈಸ್ವಾಲ್, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಹೆಸರಿನಲ್ಲಿದ್ದ 14 ವರ್ಷದ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ್ದಾರೆ.
ಹದಿನಾರನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಯಶಸ್ವಿ ಜೈಸ್ವಾಲ್, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ವೆಸ್ಟ್ ಇಂಡೀಸ್ ವಿರುದ್ಧ ಶತಕ (177 ರನ್) ಬಾರಿಸಿದ್ದ ಜೈಸ್ವಾಲ್, ಟಿ20 ಸ್ವರೂಪದ ಮೊದಲ ಪಂದ್ಯದಲ್ಲೇ 1 ರನ್ ಗಳಿಸಿ ಔಟಾಗಿ ನಿರಾಸೆ ಮೂಡಿಸಿದರೂ, ದ್ವಿತೀಯ ಪಂದ್ಯದಲ್ಲೇ ತಮ್ಮ ಎಂದಿನ ಖದರ್ ನಲ್ಲಿ ಬ್ಯಾಟಿಂಗ್ ನಡೆಸಿ ವೆಸ್ಟ್ ಇಂಡೀಸ್ ಬೌಲರ್ ಗಳ ಬೆಂಡೆತ್ತಿದ ಎಡಗೈ ಆಟಗಾರ, ಚೊಚ್ಚಲ ಅರ್ಧಶತಕ (84* ರನ್) ಸಿಡಿಸಿ ಆಯ್ಕೆಗಾರರ ಗಮನ ಸೆಳೆದಿದ್ದಾರೆ.
ವೆಸ್ಟ್ ಇಂಡೀಸ್ ನ ದಿಗ್ಗಜ ಬೌಲರ್ ಗಳ ಬೆವರಿಳಿಸಿದ ಐಪಿಎಲ್ ತಾರೆ ಯಶಸ್ವಿ ಜೈಸ್ವಾಲ್, ಟೀಮ್ ಇಂಡಿಯಾ ಪರ ಅತ್ಯಂತ ಕಿರಿಯ ವಯಸ್ಸಿನಲ್ಲೇ ಚೊಚ್ಚಲ ಅರ್ಧಶತಕ ಸಿಡಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದರು. ಆ ಮೂಲಕ ಭಾರತದ ಇನ್ ಫಾರ್ಮ್ ನಾಯಕ ರೋಹಿತ್ ಶರ್ಮಾ ಹೆಸರಿನಲ್ಲಿದ್ದ 14 ವರ್ಷದ ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ.
ಟೀಮ್ ಇಂಡಿಯಾ ಪರ ಚೊಚ್ಚಲ ಅರ್ಧಶತಕ ಸಿಡಿಸಿದ ಕಿರಿಯ ಆಟಗಾರರು (ಟಿ20-ಐ ಕ್ರಿಕೆಟ್)
* ಯಶಸ್ವಿ ಜೈಸ್ವಾಲ್- 21 ವರ್ಷ 227 ದಿನ- ವೆಸ್ಟ್ ಇಂಡೀಸ್ ವಿರುದ್ಧ- 2023
* ರೋಹಿತ್ ಶರ್ಮಾ- 22 ವರ್ಷ 41 ದಿನ- ಇಂಗ್ಲೆಂಡ್ ವಿರುದ್ಧ- 2009
* ಇಶಾನ್ ಕಿಶನ್- 22 ವರ್ಷ 41 ದಿನ- ಇಂಗ್ಲೆಂಡ್ ವಿರುದ್ಧ- 2021
* ಅಜಿಂಕ್ಯ ರಹಾನೆ- 23 ವರ್ಷ 86 ದಿನ- ಇಂಗ್ಲೆಂಡ್ ವಿರುದ್ಧ- 2011