ತಿರುವನಂತಪುರ: ಸುಮಾರು 6 ತಿಂಗಳ ಹೆಣ್ಣು ಮಗು (Girl Baby) ಭಾಗಶಃ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೇರಳದ (Kerala) ತಿರುವಲ್ಲಾ ಬಳಿ ನಡೆದಿದೆ. ತಿರುವಲ್ಲಾ (Thiruvalla) ಬಳಿಯ ರಸ್ತೆ ಪಕ್ಕದ ಜೌಗು ಪ್ರದೇಶದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಪ್ರದೇಶದಲ್ಲಿ ಕೆಟ್ಟ ವಾಸನೆ ಬರುತ್ತಿದ್ದ ಹಿನ್ನೆಲೆ ಸಮೀಪದ ಅಂಗಡಿಯ ಕೆಲಸದವರೊಬ್ಬರು ಇದರ ಮೂಲವನ್ನು ಹುಡುಕಿಕೊಂಡು ಹೋದಾಗ ಕೊಳೆತ ಸ್ಥಿತಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.
ಈ ಕುರಿತು ಸ್ಥಳೀಯರು ಮಾಧ್ಯಮದವರೊಂದಿಗೆ ಮಾತನಾಡಿದ್ದು, ಮೃತದೇಹವು ಕೈಕಾಲುಗಳನ್ನು ಕಳೆದುಕೊಂಡಿದೆ. ಗುರುತಿಸಲು ಸಾಧ್ಯವಾಗದಷ್ಟರ ಮಟ್ಟಿಗೆ ಮುಖ ಕೊಳೆತಿದೆ ಎಂದರು. ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮಧ್ಯರಾತ್ರಿ ಸಮೀಪದ ವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ಅಸ್ವಾಭಾವಿಕ ಮತ್ತು ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಘಟನೆಯ ಕುರಿತು ಮಾಹಿತಿ ಪಡೆಯುವ ಸಲುವಾಗಿ ಪೊಲೀಸರು ಆ ಪ್ರದೇಶದಲ್ಲಿನ ಅಂಗಡಿಗಳು ಮತ್ತು ಮನೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.