ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕಾಮೆಂಟರಿ ಮತ್ತು ವಿಷ್ಲೇಷಣೆ ನಿಭಾಯಿಸುತ್ತಿರುವ ಕನ್ನಡಿಗ ರಾಬಿನ್ ಉತ್ತಪ್ಪ, ಯುವ ಆಟಗಾರರು ಭವಿಷ್ಯದಲ್ಲಿ ದಿಗ್ಗಜರಾಗಿ ಬೆಳೆಯುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಗುಣಗಾನ ಮಾಡಿದ್ದಾರೆ. ಜಿಯೊ ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾಬಿನ್, ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಮಾದರಿ ಭಾರತ ತಂಡಕ್ಕೆ ಬೆಸ್ಟ್ ಆರಂಭಿಕ ಜೋಡಿಯಾಗಿ ಬೆಳೆಯುವ ಸಾಮರ್ಥ್ಯ ಗಿಲ್-ಜೈಸ್ವಾಲ್ ಜೋಡಿಗಿದೆ ಎಂದಿದ್ದಾರೆ.
ಅಂದಹಾಗೆ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಈಗಲೂ ಸಾರ್ವಕಾಲಿಕ ಗರಿಷ್ಠ ಜೊತೆಯಾಟದ ವಿಶ್ವ ದಾಖಲೆ ಹೊಂದಿದ್ದಾರೆ. ಒಡಿಐನಲ್ಲಿ ಈ ಜೋಡಿ ಆಡಿದ 176 ಇನಿಂಗ್ಸ್ಗಳಲ್ಲಿ ವಿಶ್ವ ದಾಖಲೆಯ 176 ರನ್ ಬಾರಿಸಿದ್ದಾರೆ. ಇದರಲ್ಲಿ ಆರಂಭಿಕರಾಗಿಯೇ 6609 ರನ್ ಪೇರಿಸಿದ್ದಾರೆ. 2ನೇ ಸ್ಥಾನದಲ್ಲಿರುವ ಶ್ರೀಲಂಕಾದ ದಿಗ್ಗಜರಾದ ಮಹೇಲಾ ಜಯವರ್ಧನೆ ಮತ್ತು ಕುಮಾರ ಸಂಗಕ್ಕಾರ, ಒಟ್ಟಾರೆ 5992 ರನ್ಗಳನ್ನು ಜೊತೆಯಾಗಿ ಗಳಿಸಿದ್ದಾರೆ.
“ಟೀಮ್ ಇಂಡಿಯಾ ಪರ ಆಡುವ ಎಲ್ಲಾ ಆಟಗಾರರಲ್ಲಿ ಸಮಾನ ಸಾಮರ್ಥ್ಯ ಇರುತ್ತದೆ. ಆದರೆ, ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಅವರಲ್ಲಿ ವಿಶೇಷ ಸಾಮರ್ಥ್ಯ ಇರುವುದನ್ನು ನಾವು ಕಾಣಬಹುದಾಗಿದೆ. ಇನ್ನು ಈ ಜೋಡಿ ಜೊತೆಯಾಗಿಯೂ ಅದ್ಭುತವಾಗಿ ಆಡುತ್ತಿದೆ. ಇದೇ ರೀತಿಯ ಆಟ ಮುಂದುವರಿಸಿದರೆ ಇನ್ನು ಕೆಲವೇ ವರ್ಷಗಳಲ್ಲಿ ಭಾರತದ ಬೆಸ್ಟ್ ಜೋಡಿಯಾಗಬಲ್ಲರು. ಇನಿಂಗ್ಸ್ ಆರಂಭಿಸಿ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಅಬ್ಬರಿಸುತ್ತಿದ್ದ ಮಾದರಿ, ಇವರೂ ಅಬ್ಬರಿಸಬಹುದು,” ಎಂದು ರಾಬಿನ್ ಅಭಿಪ್ರಾಯ ಪಟ್ಟಿದ್ದಾರೆ.