ಮಹಾರಾಷ್ಟ್ರ: ಕೆಲವು ಹಿತೈಷಿಗಳು ತಮಗೆ ಬಿಜೆಪಿ ಸೇರುವಂತೆ ಮನವೊಲಿಸಲು ಪ್ರಯತ್ನಿಸಿದ್ದರು ಎಂದು ಹೇಳಿರುವ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ತಾವು ಹಾಗೂ ತಮ್ಮ ಪಕ್ಷ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದ ಸೋಲಾಪುರ್ ಜಿಲ್ಲೆಯ ಸಂಗೋಲಾದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಶರದ್ ಪವಾರ್, ಎನ್ಸಿಪಿ ರಾಜಕೀಯ ನೀತಿಗಳಿಗೆ ಬಿಜೆಪಿಯ ಸಿದ್ಧಾಂತಗಳು ಸರಿ ಹೊಂದುವುದಿಲ್ಲ ಎಂದು ತಿಳಿಸಿದ್ದಾರೆ.
ಎನ್ಸಿಪಿ ರಾಷ್ಟ್ರೀಯ ಅಧ್ಯಕ್ಷನಾಗಿ ನಾನು ಬಿಜೆಪಿ ಜೊತೆ ನಮ್ಮ ಪಕ್ಷ ಸೇರ್ಪಡೆ ಆಗೋದಿಲ್ಲ ಎಂದು ಸ್ಪಷ್ಟಪಡಿಸಲು ಇಚ್ಚಿಸುತ್ತೇನೆ ಎಂದಿರುವ ಶರದ್ ಪವಾರ್, ಬಿಜೆಪಿಯ ತತ್ವ, ಸಿದ್ಧಾಂತಗಳು ಎನ್ಸಿಪಿಯ ರಾಜಕೀಯ ನೀತಿಗಳಿಗೆ ಹೊಂದಾಣಿಕೆ ಆಗಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಆದಾಗ್ಯೂ ಕೆಲವರು ಹಿತೈಷಿಗಳು ತಮಗೆ ಬಿಜೆಪಿ ಜೊತೆ ಸೇರಿ ಎಂದು ಮನವೊಲಿಕೆ ಮಾಡಲು ಯತ್ನಿಸಿದರು. ಆದರೆ, ನಾನು ಎಂದಿಗೂ ಬಿಜೆಪಿ ಜೊತೆ ಸೇರಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಸ್ಪಷ್ಟಪಡಿಸಿದ್ದೇನೆ ಎಂದು ಶರದ್ ಪವಾರ್ ಹೇಳಿದ್ದಾರೆ.