ಕಲ್ಲು ಸಕ್ಕರೆಯನ್ನು ಹೆಚ್ಚಾಗಿ ಎಲ್ಲರೂ ನೋಡಿರುತ್ತೀರಿ, ಅದರ ಬಗ್ಗೆ ಕೇಳಿರುತ್ತೀರಿ. ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ, ಆಮಶಂಕೆಯ ರೀತಿ ಸಮಸ್ಯೆಯಾಗಿ ಮಲದಲ್ಲಿ ರಕ್ತ ಬೀಳುತ್ತಿದ್ದರೆ, ಮನೆಯಲ್ಲಿನ ಹಿರಿಯರು ಕಲ್ಲು ಸಕ್ಕರೆಯನ್ನು ತಿನ್ನಲು ಹೇಳುತ್ತಾರೆ. ಸಕ್ಕರೆಗೂ ಇಲ್ಲದ ಒಳ್ಳೆಯ ಗುಣ ಸ್ವಭಾವ ಕಲ್ಲುಸಕ್ಕರೆಯಲ್ಲಿ ಏನಿದೆ ಎಂದು ನೀವು ಮನಸ್ಸಿನಲ್ಲೇ ಅಂದುಕೊಳ್ಳುತ್ತಿ ರಬಹುದು. ಇದಕ್ಕೆ ಕಲ್ಲು ಸಕ್ಕರೆ ತಯಾರು ಮಾಡುವ ಪ್ರಕ್ರಿಯೆಯನ್ನು ಮೊದಲು ನೀವು ತಿಳಿದುಕೊಳ್ಳಬೇಕು.
ಕಲ್ಲು ಸಕ್ಕರೆ ತಯಾರು ಮಾಡುವ ಬಗೆಯನ್ನು ನೋಡಿದರೆ ಬೆಲ್ಲ ಅಥವಾ ಸಕ್ಕರೆಯನ್ನು ತಯಾರು ಮಾಡುವ ಸಂದರ್ಭದಲ್ಲಿ ಕೆಲವೊಂದು ಉಳಿಕೆ ಪದಾರ್ಥಗಳನ್ನು ಬಳಸಿ ಸಾವಯುವ ಪದ್ದತಿಯಲ್ಲಿ ನೈಸರ್ಗಿಕವಾಗಿ ಕಲ್ಲು ಸಕ್ಕರೆ ತಯಾರು ಮಾಡುತ್ತಾರೆ. ಕಲ್ಲು ಸಕ್ಕರೆಯಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಲಾಭಗಳು ಲಭ್ಯವಾಗುತ್ತವೆ.
ಶೀತ ಮತ್ತು ಕೆಮ್ಮಿಗೆ ರಾಮಬಾಣ
ವಿಶೇಷವಾಗಿ ಚಳಿಗಾಲದಲ್ಲಿ ಶೀತ ಮತ್ತು ಶೀತಕ್ಕೆ ಸಂಬಂಧ ಪಟ್ಟ ಹಲವಾರು ಆರೋಗ್ಯ ಸಮಸ್ಯೆಗಳು ಮನುಷ್ಯನಿಗೆ ಎದುರಾಗುತ್ತವೆ.
ಪ್ರಕೃತಿಯಲ್ಲಿನ ಬದಲಾವಣೆಗಳು ಮನುಷ್ಯನ ಆರೋಗ್ಯದ ಮೇಲೆ ಈ ಬದಲಾವಣೆಗಳನ್ನು ತರುತ್ತವೆ ಎಂದರೆ ತಪ್ಪಲ್ಲ.
ಮೊದಲೇ ಚಳಿಗಾಲ ಆಗಿರುವುದರಿಂದ ನಮ್ಮ ದೇಹವನ್ನು ಸಾಧ್ಯವಾದಷ್ಟು ಹೊರಗಿನ ತಾಪಮಾನಕ್ಕೆ ಹೊಂದಿಕೊಳ್ಳುವಂತೆ ನೋಡಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯ.
ಈ ಪ್ರಕ್ರಿಯೆಯಲ್ಲಿ ನಮಗೆ ಕಲ್ಲು ಸಕ್ಕರೆ ಸಾಕಷ್ಟು ಸಹಾಯಕ್ಕೆ ಬರುತ್ತದೆ. ಕಪ್ಪು ಕಾಳು ಮೆಣಸಿನ ಜೊತೆ ಅರ್ಧ ಟೀ ಚಮಚ ಕಲ್ಲು ಸಕ್ಕರೆ ಹಾಕಿ ಮಿಶ್ರಣ ಮಾಡಿ ಇದನ್ನು ಸೇವಿಸುವ ಅಭ್ಯಾಸ ಮಾಡಿಕೊಂಡರೆ ಶೀತದಿಂದ ಉಂಟಾದ ಗಂಟಲು ನೋವು ವಾಸಿಯಾಗುತ್ತದೆ.
ಇನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ಕಲ್ಲು ಸಕ್ಕರೆ ಮತ್ತು ಕಪ್ಪು ಮೆಣಸನ್ನು ಮಿಶ್ರಣ ಮಾಡಿ ಕುಡಿಯುವುದರಿಂದ ಕೆಮ್ಮು ನಿವಾರಣೆಯಾಗಿ ಮೂಗು ಮತ್ತು ಎದೆಯಲ್ಲಿನ ಸಿಂಬಳ ಕರಗಿ ನೀರಾಗುತ್ತದೆ.
ಜೀರ್ಣ ಪ್ರಕ್ರಿಯೆ ಉತ್ತಮಗೊಳ್ಳುತ್ತದೆ
ಸಾಮಾನ್ಯವಾಗಿ ನಮಗೆ ಶೀತ ಉಂಟಾದ ಸಂದರ್ಭದಲ್ಲಿ ಯಾವುದೇ ಆಹಾರ ತಿಂದರೂ ಬಾಯಿಗೆ ರುಚಿ ಸಿಗುವುದಿಲ್ಲ. ಇದರಿಂದ ನಾವು ಸೇವಿಸಿದ ಆಹಾರ ಸರಿಯಾಗಿ ಜೀರ್ಣ ಕೂಡ ಆಗುವುದಿಲ್ಲ. ಹೆಚ್ಚಾಗಿ ವಾಕರಿಕೆ ಮತ್ತು ವಾಂತಿ ಸಮಸ್ಯೆ ಕಾಡುತ್ತದೆ.
ಕೆಲವರಿಗೆ ಅಜೀರ್ಣತೆ ಉಂಟಾಗಿ ಮಲಬದ್ಧತೆಯ ಸಮಸ್ಯೆ ಕೂಡ ಎದುರಾಗುತ್ತದೆ. ಈ ಸಮಯದಲ್ಲಿ ಒಂದು ಉತ್ತಮ ಪರಿಹಾರ ಎಂದರೆ ಆಹಾರ ಸೇವನೆಯ ನಂತರ ಬಾಯಲ್ಲಿ ಒಂದು ಮಧ್ಯಮ ಗಾತ್ರದ ಕಲ್ಲು ಸಕ್ಕರೆ ಚೂರನ್ನು ಹಾಕಿಕೊಂಡು ಸ್ವಲ್ಪ ಹೊತ್ತು ಅದರ ರಸ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ನಿಧಾನವಾಗಿ ನಿಮ್ಮ ಜೀರ್ಣಾಂಗ ವ್ಯವಸ್ಥೆ ಉತ್ತಮಗೊಂಡು ನಿಮ್ಮ ಆರೋಗ್ಯ ವೃದ್ಧಿಗೊಳ್ಳುತ್ತದೆ.
ದೈಹಿಕ ಶಕ್ತಿ ಹೆಚ್ಚಾಗುತ್ತದೆ
ಕಲ್ಲು ಸಕ್ಕರೆಯಲ್ಲಿ ಹೆಚ್ಚಿನ ಪ್ರಮಾಣದ ಶಕ್ತಿಯ ಅಂಶವಿದೆ ಎಂದು ಹೇಳುತ್ತಾರೆ. ಇದರಿಂದ ನಿಮ್ಮ ದೇಹಕ್ಕೆ ಹೊಸ ಚೈತನ್ಯ ಸಿಕ್ಕಿದಂತಾಗಿ, ನಿಮ್ಮ ಮಾನಸಿಕ ಆರೋಗ್ಯ ಸಹ ಉತ್ತಮಗೊಂಡು ಮನಸ್ಸು ಮತ್ತು ದೇಹ ಸದಾ ಚಟುವಟಿಕೆಯಿಂದ ಕೂಡಿರಲು ಸಹಾಯ ಮಾಡುತ್ತದೆ.
ಮುಖ್ಯವಾಗಿ ಋತುಚಕ್ರದಲ್ಲಿರುವ ಮಹಿಳೆಯರಿಗೆ ಉಂಟಾಗುವ ಮಾನಸಿಕ ಕಿರಿಕಿರಿ ಕಲ್ಲು ಸಕ್ಕರೆ ಸೇವನೆಯಿಂದ ತಪ್ಪುತ್ತದೆ. ಸಣ್ಣ ಮಕ್ಕಳಲ್ಲಿ ಕೂಡ ನೆನಪಿನ ಶಕ್ತಿ ಜಾಸ್ತಿ ಮಾಡಿ ದೀರ್ಘ ಕಾಲದ ಮೆದುಳಿನ ಆಯಾಸವನ್ನು ಕಡಿಮೆ ಮಾಡುವ ಶಕ್ತಿ ಕಲ್ಲು ಸಕ್ಕರೆಗೆ ಇದೆ.
ಪುಟ್ಟ ಮಕ್ಕಳು, ಶಾಲೆಗೆ ಹೋಗುವವರು, ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ರಾತ್ರಿಯ ಸಮಯದಲ್ಲಿ ಮಲಗುವ ಮುಂಚೆ ಒಂದು ಲೋಟ ಬಿಸಿ ಹಾಲಿಗೆ ಕಲ್ಲು ಸಕ್ಕರೆ ಪುಡಿ ಹಾಕಿ ಮಿಶ್ರಣ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ.
ದೇಹಕ್ಕೆ ನವ ಚೈತನ್ಯ ಒದಗಿಸುತ್ತದೆ
ಕಲ್ಲು ಸಕ್ಕರೆಯ ಅತ್ಯದ್ಭುತ ಗುಣ ಇದು ಎಂದು ಹೇಳಬಹುದು. ಬೇಸಿಗೆಯ ಸಮಯದಲ್ಲಿ ನಾವು ಸಾಧಾರಣವಾಗಿ ಸಾಕಷ್ಟು ದಣಿದಿರುತ್ತೇವೆ. ನಮ್ಮ ಮನಸ್ಸು ಮತ್ತು ನಮ್ಮ ದೇಹ ಎರಡೂ ವಿಶ್ರಾಂತಿ ಬಯಸುತ್ತವೆ.
ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ!
ಮಾನಸಿಕ ಒತ್ತಡ ದೂರವಾಗಿ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕಬೇಕಾದರೆ ಒಂದು ಲೋಟ ನೀರಿಗೆ 1 ಟೇಬಲ್ ಚಮಚ ಕಲ್ಲು ಸಕ್ಕರೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸಂಜೆಯ ಸಮಯದಲ್ಲಿ ಕುಡಿದರೆ ಸಾಕಷ್ಟು ಒಳ್ಳೆಯದು ಎಂಬುದು ತಜ್ಞರ ಅಭಿಪ್ರಾಯ. ದೇಹಕ್ಕೆ ತಕ್ಷಣವೇ ಆಯಾಸವನ್ನು ದೂರ ಮಾಡುವಂತಹ ಮತ್ತು ನವ ಚೈತನ್ಯವನ್ನು ಒದಗಿಸುವಂತಹ ಪಾನೀಯ ಇದು ಎಂದು ಹೇಳಬಹುದು.