ಎಲ್ಲರಿಗೂ ತಿಳಿದಿರುವಂತೆ ಬಾಳೆ ಗಿಡದ ಬಹುತೇಕ ಎಲ್ಲಾ ಭಾಗಗಳೂ ಅದ್ಭೂತವಾದ ಪ್ರಯೋಜನಗಳನ್ನು ಹೊಂದಿವೆ. ಇದರ ಕಾಂಡದಿಂದ ಹಿಡಿದು ಹಣ್ಣು, ಹೂವಿನವರೆಗೂ ಎಲ್ಲಾ ಭಾಗಗಳೂ ಸೇವಿಸಲು ಯೋಗ್ಯವಾಗಿದೆ. ಬಾಳೆ ಹೂವು ಆರೋಗ್ಯಕರ, ಪ್ರೋಟೀನ್ಯುಕ್ತವಾಗಿದ್ದು, ಇದರಿಂದ ಅತ್ಯಂತ ರುಚಿಕರ ಖಾದ್ಯವನ್ನೂ ತಯಾರಿಸಬಹುದು. ನಾವಿಂದು ತುಂಬಾ ರುಚಿಕರವಾಗಿ ಬಾಳೆ ಹೂವಿನ ಪಲ್ಯ (Banana Flower Palya) ಹೇಗೆ ಮಾಡುವುದು ಎಂದು ಹೇಳಿಕೊಡುತ್ತೇವೆ. ಮನೆಯಲ್ಲಿ ಬಾಳೆ ಗೊನೆಯಿದ್ದಾಗ ಅದರ ಹೂವನ್ನು ಎಸೆಯದೇ ಈ ರೀತಿ ಅಡುಗೆಯನ್ನು ಮಾಡಿ ನೋಡಿ.
ಬೇಕಾಗುವ ಪದಾರ್ಥಗಳು:
ಬಾಳೆ ಹೂವು – 1
ತೆಂಗಿನ ತುರಿ – ಕಾಲು ಕಪ್
ನಿಂಬೆ ರಸ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ರುಬ್ಬಲು:
ಕಡಲೆ ಬೇಳೆ – ಅರ್ಧ ಕಪ್
ಶುಂಠಿ – 1 ಇಂಚು
ಹಸಿರು ಮೆಣಸಿನ ಕಾಯಿ – 2
ಕೆಂಪು ಮೆಣಸಿನಕಾಯಿ – 1
ಅರಿಶಿನ – ಕಾಲು ಟೀಸ್ಪೂನ್
ಒಗ್ಗರಣೆಗೆ:
ಎಣ್ಣೆ – 2 ಟೀಸ್ಪೂನ್
ಸಾಸಿವೆ – ಮುಕ್ಕಾಲು ಟೀಸ್ಪೂನ್
ಉದ್ದಿನ ಬೇಳೆ – 1 ಟೀಸ್ಪೂನ್
ಹಿಂಗ್ – ಚಿಟಿಕೆ
ಕರಿಬೇವಿನ ಎಲೆ -ಕೆಲವು
ಮುರಿದ ಕೆಂಪು ಮೆಣಸಿನಕಾಯಿ
ಮಾಡುವ ವಿಧಾನ:
* ಮೊದಲಿಗೆ ಬಾಳೆ ಹೂವನ್ನು ತೊಳೆಯಿರಿ. ಅತ್ಯಂತ ದಪ್ಪ ಹಾಗೂ ಹೂವಿನ ಸುಮಾರು 3-4 ಪದರಗಳನ್ನು ತೆಗೆದುಹಾಕಿ. (ಅವು ಕಹಿಯಾಗಿರುವುದರಿಂದ ಬಳಸದಿರುವುದು ಉತ್ತಮ)
* ಈಗ ಬಾಳೆ ಹೂವನ್ನು ತುದಿಯಿಂದ ಸಣ್ಣಗೆ ಕತ್ತರಿಸಿಕೊಳ್ಳಿ. ಒಂದು ಬಟ್ಟಲಿನಲ್ಲಿ ನೀರು ಹಾಕಿ, ಅದರಲ್ಲಿ ಕತ್ತರಿಸಿದ ಹೂವನ್ನು ಹಾಕಿ 10 ನಿಮಿಷ ನೆನೆಸಿ.
* ಈಗ ನೀರಿನಿಂದ ಹೂವನ್ನು ಬಸಿದು ಪಕ್ಕಕ್ಕಿಡಿ.
* ಕಡಲೆ ಬೇಳೆಯನ್ನು 2-3 ಗಂಟೆ ಮೊದಲೇ ತೊಳೆದು ನೆನೆಸಿಟ್ಟಿರಿ. ಬಳಿಕ ನೀರಿನಿಂದ ತೆಗೆದು ಮಿಕ್ಸರ್ ಜಾರ್ಗೆ ಹಾಕಿ.
* ಶುಂಠಿ, ಕೆಂಪು ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ ಮತ್ತು ಉಪ್ಪಿನೊಂದಿಗೆ ಕಡಲೆ ಬೇಳೆಯನ್ನು ಒರಟಾಗಿ ರುಬ್ಬಿಕೊಳ್ಳಿ. (ನೀರು ಸೇರಿಸುವುದು ಬೇಡ)
* ಈಗ ರುಬ್ಬಿದ ಮಿಶ್ರಣವನ್ನು ಅಗಲವಾದ ಪಾತ್ರೆಗೆ ಹಾಕಿ, ಅದಕ್ಕೆ ಹೆಚ್ಚಿಟ್ಟಿದ್ದ ಬಾಳೆ ಹೂವನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಇಡ್ಲಿ ತಯಾರಿಸುವ ಸ್ಟೀಮರ್ ಅನ್ನು ಬಿಸಿ ಮಾಡಿಕೊಳ್ಳಿ. ಸ್ಟೀಮರ್ನ ಮೇಲಿನ ತಟ್ಟೆಯಲ್ಲಿ ಬಾಳೆ ಎಲೆ ಹರಡಿ, ಅದರ ಮೇಲೆ ತಯಾರಿಸಿಟ್ಟ ಮಿಶ್ರಣವನ್ನು ಹಾಕಿ, ಮುಚ್ಚಿ, ಸುಮಾರು 15 ನಿಮಿಷ ಬೇಯಿಸಿಕೊಳ್ಳಿ.
* 15 ನಿಮಿಷಗಳ ಬಳಿಕ ಮಿಶ್ರಣವನ್ನು ಆರಲು ಬಿಡಿ.
* ಮಿಶ್ರಣದಲ್ಲಿ ಗಂಟುಗಳಾಗಿದ್ದರೆ, ಅದನ್ನು ನಿಧಾನವಾಗಿ ಕೈಯಿಂದಲೇ ಪುಡಿ ಮಾಡಿಕೊಳ್ಳಿ.
* ಈಗ ಬಾಣಲೆಯನ್ನು ಬಿಸಿ ಮಾಡಿ, ಅದಕ್ಕೆ ಎಣ್ಣೆ ಹಾಕಿ, ಸಾಸಿವೆ ಒಡೆಸಿ, ಉದ್ದಿನ ಬೇಳೆ, ಅರಿಶಿನ, ಹಿಂಗ್, ಕರಿಬೇವಿನ ಎಲೆ ಹಾಗೂ ಒಡೆದ ಕೆಂಪು ಮೆಣಸಿನಕಾಯಿ ಹಾಕಿ 1 ನಿಮಿಷ ಹುರಿಯಿರಿ.
* ಈಗ ಬೇಯಿಸಿಟ್ಟ ಬಾಳೆಹೂವಿನ ಮಿಶ್ರಣವನ್ನು ಬೆರೆಸಿ, ಕಡಿಮೆ ಉರಿಯಲ್ಲಿ 5-10 ನಿಮಿಷಗಳ ವರೆಗೆ ಚೆನ್ನಾಗಿ ಹುರಿದುಕೊಳ್ಳಿ.
* ಬಳಿಕ ಉರಿಯನ್ನು ಆಫ್ ಮಾಡಿ, ತುರಿದ ತೆಂಗಿನಕಾಯಿ ಹಾಗೂ ನಿಂಬೆ ಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಇದೀಗ ಬಾಳೆ ಹೂವಿನ ಪಲ್ಯ ತಯಾರಾಗಿದ್ದು, ಬಿಸಿ ಬಿಸಿಯಾದ ಅನ್ನದೊಂದಿಗೆ ಇಲ್ಲವೇ ಚಪಾತಿಯೊಂದಿಗೆ ಸವಿಯಿರಿ.