ಬಟರ್ ಚಿಕನ್ ಎಂದರೆ ಯಾವ ನಾನ್ವೆಜ್ ಪ್ರಿಯರ ಬಾಯಲ್ಲಿ ನೀರು ಬರದೇ ಇರಲ್ಲ ಹೇಳಿ? ಭಾರತದಾದ್ಯಂತ ಈ ಚಿಕನ್ ರೆಸಿಪಿ ಅತ್ಯಂತ ಫೇಮಸ್ ಆಗಿದ್ದರೂ ಇದರ ರುಚಿಗೆ ಮಾರುಹೋಗಿ ಹೆಸರನ್ನು ಯಾವಾಗಲೂ ನೆನಪಿಟ್ಟುಕೊಳ್ಳೊ ವಿದೇಶಿಗರೂ ಇದ್ದಾರೆ. ನಾವಿಂದು ಬಾಂಬೆ ಸ್ಟೈಲ್ ಬಟರ್ ಚಿಕನ್ ಮಾಡೋದು ಹೇಗೆಂದು ಹೇಳಿಕೊಡಲಿದ್ದೇವೆ. ಈ ರೆಸಿಪಿಯನ್ನು ರೆಸ್ಟೊರೆಂಟ್ಗಳಲ್ಲೇ ಏಕೆ, ಮನೆಯಲ್ಲೂ ಮಾಡಿ ಸವಿದು ನೋಡಿ.
ಬೇಕಾಗುವ ಪದಾರ್ಥಗಳು:
ಬೆಣ್ಣೆ – ಅರ್ಧ ಕಪ್
ಕತ್ತರಿಸಿದ ಈರುಳ್ಳಿ – 2
ಕೊಚ್ಚಿದ ಬೆಳ್ಳುಳ್ಳಿ – 3
ಚರ್ಮ, ಮೂಳೆ ರಹಿತ ಚಿಕನ್ ತುಂಡುಗಳು – 1 ಕೆಜಿ
ಉಪ್ಪು – ಅರ್ಧ ಟೀಸ್ಪೂನ್
ಕರಿಮೆಣಸಿನಪುಡಿ – ಅರ್ಧ ಟೀಸ್ಪೂನ್
ಭಾರತೀಯ ಕರಿ ಪೇಸ್ಟ್ – 4 ಟೀಸ್ಪೂನ್
ಕೊಚ್ಚಿದ ಶುಂಠಿ – 2 ಟೀಸ್ಪೂನ್
ದಾಲ್ಚಿನ್ನಿ ಪುಡಿ – 1 ಟೀಸ್ಪೂನ್
ಕತ್ತರಿಸಿದ ಟೊಮೆಟೋ – 1
ಹುಳಿ ಕ್ರೀಮ್ – ಕಾಲು ಕಪ್
ಹೆಚ್ಚಿದ ಕೊತ್ತಂಬರಿ ಸೊಪ್ಪು – ಕಾಲು ಕಪ್
ನಿಂಬೆ ಹಣ್ಣು – 1
ಮಾಡುವ ವಿಧಾನ:
* ಮೊದಲಿಗೆ ಒಂದು ಕಡಾಯಿಯನ್ನು ಬಿಸಿಗಿಟ್ಟು, ಮಧ್ಯಮ ಉರಿಯಲ್ಲಿ ಅರ್ಧದಷ್ಟು ಬೆಣ್ಣೆಯನ್ನು ಕರಗಿಸಿ.
* ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ ಸೇರಿಸಿ ಆಗಾಗ ಕೈಯಾಡಿಸುತ್ತಾ 5 ನಿಮಿಷ ಹುರಿಯಿರಿ.
* ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿದ ಚಿಕನ್ ಅನ್ನು ಅದಕ್ಕೆ ಹಾಕಿ, ಉಪ್ಪು ಮತ್ತು ಕರಿಮೆಣಸನ್ನು ಸಿಂಪಡಿಸಿ ಉರಿಯನ್ನು ಹೆಚ್ಚಿಸಿ ಚಿಕನ್ ಕಂದು ಬಣ್ಣಕ್ಕೆ ತಿರುವುವವರೆಗೆ ಬೇಯಿಸಿ.
* ಬಳಿಕ ಕರಿಬೇವು, ಶುಂಠಿ, ದಾಲ್ಚಿನ್ನಿ ಸೇರಿಸಿ 30 ಸೆಕೆಂಡುಗಳ ಕಾಲ ಬೆರೆಸಿ.
* ಬಳಿಕ ಟೊಮೆಟೋ ಹಾಗೂ ಉಳಿದ ಬೆಣ್ಣೆಯನ್ನು ಸೇರಿಸಿ ಕುದಿಸಿಕೊಳ್ಳಿ.
* ಉರಿಯನ್ನು ಕಡಿಮೆ ಮಾಡಿ ಮುಚ್ಚಳ ಮುಚ್ಚಿ, 20 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
* ನಂತರ ಹುಳಿ ಕ್ರೀಮ್ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ.
* ಉರಿಯನ್ನು ಆಫ್ ಮಾಡಿ, ನಿಂಬೆ ರಸವನ್ನು ಸೇರಿಸಿ.
* ಇದೀಗ ಬಾಂಬೆ ಬಟರ್ ಚಿಕನ್ ತಯಾರಾಗಿದ್ದು ಬಿಸಿಬಿಸಿಯಾಗಿ ಅನ್ನ ಅಥವಾ ಚಪಾತಿಯೊಂದಿಗೆ ಸವಿಯಿರಿ.