ಜೋಹಾನ್ಸ್ಬರ್ಗ್: ಹಲವು ದಿನಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಜಿಂಬಾಬ್ವೆ ಕ್ರಿಕೆಟ್ ದಂತಕಥೆ ಹೀತ್ ಸ್ಟ್ರೀಕ್ (49) (Heath Streak) ಅವರು ನಿಧನರಾಗಿದ್ದಾರೆ. ಕರುಳು ಹಾಗೂ ಯಕೃತ್ತಿನ ಕ್ಯಾನ್ಸರ್ನಿಂದ (Cancer) ಬಳಲುತ್ತಿದ್ದ ಸ್ಟ್ರೀಕ್ ದಕ್ಷಿಣ ಆಫ್ರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊನೆಗೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
1993ರಲ್ಲಿ ಪಾಕಿಸ್ತಾನ (Pakistan) ವಿರುದ್ಧ ನಡೆದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ (International Cricket) ಎಂಟ್ರಿ ಕೊಟ್ಟಿದ್ದ ಹೀತ್ ಸ್ಟ್ರೀಕ್, ರಾವಲ್ಪಿಂಡಿಯಲ್ಲಿ ನಡೆದ 2ನೇ ಟೆಸ್ಟ್ನಲ್ಲೇ 8 ವಿಕೆಟ್ ಪಡೆಯುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದರು.
ಜಿಂಬಾಬ್ವೆಯ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾದ ಸ್ಟ್ರೀಕ್ 2000 ಮತ್ತು 2004ರ ವಿಶ್ವಕಪ್ ಟೂರ್ನಿ ವೇಳೆ ತಂಡವನ್ನ ಮುನ್ನಡೆಸಿದ್ದರು. 65 ಟೆಸ್ಟ್ ಪಂದ್ಯಗಳು ಮತ್ತು 189 ಏಕದಿನ ಪಂದ್ಯಗಳನ್ನಾಡಿರುವ ಸ್ಟ್ರೀಕ್, ಟೆಸ್ಟ್ ಕ್ರಿಕೆಟ್ನಲ್ಲಿ 100 ವಿಕೆಟ್ ಪಡೆದ ಏಕೈಕ ಜಿಂಬಾಬ್ವೆ ಆಟಗಾರ ಎನಿಸಿಕೊಂಡಿದ್ದರು. ಜಿಂಬಾಬ್ವೆ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದ ಹೀತ್ ಸ್ಟ್ರೀಕ್ ಟೆಸ್ಟ್ ಕ್ರಿಕೆಟ್ನಲ್ಲಿ 1,990 ರನ್, ಏಕದಿನ ಕ್ರಿಕೆಟ್ನಲ್ಲಿ 2,943 ರನ್ ಗಳಿಸಿದ್ದಾರೆ. ಹರಾರೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ 127 ರನ್ ಗಳಿಸಿದ್ದು ಏಕೈಕ ಟೆಸ್ಟ್ ಶತಕವಾಗಿದೆ.