ಬೆಂಗಳೂರಿನ ನಂದಿ ಲಿಂಕ್ಸ್ ಮೈದಾನದಲ್ಲಿ ಇಂದು ನಟ ಡಾಲಿ ಧನಂಜಯ್ (Dhananjay) ಫ್ಯಾನ್ಸ್ ಜೊತೆ ಹುಟ್ಟು ಹಬ್ಬವನ್ನು (birthday) ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳಿಗಾಗಿಯೇ ನಿನ್ನೆ ಮಧ್ಯರಾತ್ರಿಯಿಂದಲೇ ಸಮಯವನ್ನು ಮೀಸಲಿಟ್ಟಿದ್ದಾರೆ. ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಆಚರಿಸಲು ಅಭಿಮಾನಿಗಳು ‘ಡಾಲಿ ಉತ್ಸವ’ ಹೆಸರಿನಲ್ಲಿ ಕಾರ್ಯಕ್ರಮವನ್ನೇ ಆಯೋಜನೆ ಮಾಡಿದ್ದಾರೆ.
ಎರಡು ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಈ ಉತ್ಸವದಲ್ಲಿ ಪಾಲ್ಗೊಂಡಿದ್ದು, ಬಂದಿದ್ದ ಅಭಿಮಾನಿಗಳಿಗಾಗಿಯೇ ಉತ್ತರ ಕರ್ನಾಟಕ (North Karnataka) ಮತ್ತು ಸೌತ್ ಇಂಡಿಯನ್ ಶೈಲಿಯಲ್ಲಿ ಊಟವನ್ನು (lunch) ಆಯೋಜನೆ ಮಾಡಲಾಗಿದೆ. ಅದರಲ್ಲೂ ರಾಯಚೂರು, ಸಿಂಧನೂರಿನ ಅಭಿಮಾನಿಗಳು ಖಡಕ್ ರೊಟ್ಟಿ, ಎಣ್ಣೆ ಬದನೆಕಾಯಿ, ಪುಂಡೆ ಪಲ್ಯೆ, ಬೂಂದಿ, ಶೇಂಗ ಹಿಂಡಿ , ಮೆಣಸಿನಕಾಯಿ ಒಳಗೊಂಡ ಊಟದ ವ್ಯವಸ್ಥೆ ಮಾಡಿದ್ದಾರೆ. ಡಾಲಿ ಅಭಿಮಾನಿಯಾದ ಶಿವರಾಜ್ ಪಾಟೀಲ್ ಗುಂಜಳ್ಳಿ ಉತ್ತರ ಕರ್ನಾಟಕದ ಊಟದ ವ್ಯವಸ್ಥೆ ಮಾಡಿದ್ದು ವಿಶೇಷ.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಧನಂಜಯ್, ‘ನಾನು ಹುಟ್ಟು ಹಬ್ಬ ಸೆಲೆಬ್ರೇಶನ್ ಮಾಡ್ಕೊಂಡು ತುಂಬಾ ದಿನ ಆಗಿತ್ತು. ಕಾರಣಾಂತರಗಳಿಂದ 3-4 ವರ್ಷಗಳಿಂದ ಮಾಡಿರಲಿಲ್ಲ. ಈ ವರ್ಷ ಅಭಿಮಾನಿಗಳ ಜೊತೆ ಆಚರಣೆ ಮಾಡಿದ್ದು ತುಂಬಾ ಖುಷಿಯಾಗಿದೆ. ಉತ್ತರಕಾಂಡ ಸಿನಿಮಾದ ಗಬ್ರು ಸತ್ಯ, ಅಣ್ಣಾ ಫ್ರಮ್ ಮೆಕ್ಸಿಕೋ 2 ಪ್ರಾಜೆಕ್ಟ್ ಅನೌನ್ಸ್ ಮಾಡಿದ್ದೀವಿ’ ಎಂದರು.