ಇಸ್ಲಾಮಾಬಾದ್: ರಕ್ಷಾ ಬಂಧನದ (Raksha Bandhan 2023) ಶುಭ ಸಂದರ್ಭಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ರಾಕಿ ಕಟ್ಟಲು ಪಾಕಿಸ್ತಾನಿ ಸಹೋದರಿ ಕಮರ್ ಮೊಹ್ಸಿನ್ ಶೇಖ್ ಅವರು ಭಾರತಕ್ಕೆ ಬರಲು ಸಿದ್ಧರಾಗಿದ್ದಾರೆ. ಕಳೆದ 30 ವರ್ಷಗಳಿಂದ ಪ್ರಧಾನಿ ಮೋದಿ ಅವರಿಗೆ ರಾಖಿ ಕಟ್ಟುತ್ತಿರುವ ಮೊಹ್ಸಿನ್ ಶೇಖ್ (Qamar Mohsin Sheikh) ಈ ಬಾರಿ ಭಾರತಕ್ಕೆ ಬರಲು ಸಿದ್ಧರಾಗಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡೂ ವರ್ಷಗಳು ಪ್ರಧಾನಿ ಮೋದಿಯವರನ್ನ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಕಳೆದ ಎರಡೂ ವರ್ಷಗಳು ಮನೆಯಲ್ಲೇ ತಯಾರಿಸಿದ ರಾಖಿಗಳನ್ನ ಅಂಚೆ ಮೂಲಕ ಕಳುಹಿಸಿದ್ದರು. ಜೊತೆಗೆ 2024ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಿಗಲೆಂದು ಶುಭ ಹಾರೈಸಿದ್ದರು. ಆದ್ರೆ ಈ ಬಾರಿ ಅವರು ಭಾರತಕ್ಕೆ ಬರೋದಕ್ಕೆ ಸಿದ್ಧವಾಗಿದ್ದಾರೆ.
ಇದೇ ಆಗಸ್ಟ್ 30 ರಂದು ರಕ್ಷಾಬಂಧನ ದಿನಕ್ಕೆ ದೆಹಲಿಗೆ ಬಂದಿಳಿಯುವುದಾಗಿ ತಿಳಿಸಿದ್ದಾರೆ. ಅಲ್ಲದೇ ನನ್ನ ಸಹೋದರ ಮೋದಿಗೆ ಓದುವ ಹವ್ಯಾಸವಿದೆ, ಓದುವುದು ಅಂದರೆ ಅವರಿಗೆ ತುಂಬಾ ಇಷ್ಟ. ಆದ್ದರಿಂದ ಕೃಷಿಗೆ ಸಂಬಂಧಿಸಿದ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಲು ತರಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಮೋದಿ ಅವರಿಗೆ ಆ ದೇವರು ದೀರ್ಘಾಯುಷ್ಯ ಕೊಡಲಿ ಎಂದು ನಾನು ಪ್ರತಿದಿನ ಪ್ರಾರ್ಥಿಸುತ್ತೇನೆ. ನನ್ನೆಲ್ಲಾ ಆಸೆಗಳನ್ನು ಈಡೇರಿಸುತ್ತವೆ ಎಂದು ನಾನು ನಂಬುತ್ತೇನೆ. ಈ ಹಿಂದೆ ನಾನು ಮೋದಿ ಗುಜರಾತಿನ ಮುಖ್ಯಮಂತ್ರಿ ಆಗಬೇಕು ಅಂತ ಪ್ರಾರ್ಥಿಸಿದ್ದಾಗ, ಮೋದಿ ಸಿಎಂ ಆಗಿದ್ದರು. ಹಾಗೆಯೇ 2024ರ ಚುನಾವಣೆಯಲ್ಲೂ ಅವರು ಮತ್ತೆ ಗೆಲ್ಲಬೇಕು ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ಈ ಹಿಂದೆ ಆರ್ಎಸ್ಎಸ್ ಕಾರ್ಯಕರ್ತರಾಗಿದ್ದಾಗ ಶೇಖ್ ಅವರು ಮೊದಲ ವಾರ್ಷಿಕೋತ್ಸವ ಆಚರಿಸಿದ್ದರು.