ಮಾಸ್ಕೋ: ಚಂದ್ರನ (Moon) ಅಂಗಳಕ್ಕೆ ರಷ್ಯಾ (Russia) ಕಳುಹಿಸಿದ್ದ ಲೂನಾ-25 (Luna-25) ಬಾಹ್ಯಾಕಾಶ ನೌಕೆಯು ಚಂದ್ರ ಮೇಲ್ಮೈಗೆ ಅಪ್ಪಳಿಸಿ ಪತನಗೊಂಡಿತು. ಈ ಕಾರ್ಯಾಚರಣೆಯಲ್ಲಿ ಕೆಲಸ ಮಾಡಿದ್ದ ಪ್ರಮುಖ ಭೌತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರರೊಬ್ಬರು ಮಿಷನ್ ವಿಫಲವಾದ ಸುದ್ದಿ ಕೇಳಿ ಆಸ್ಪತ್ರೆ ಸೇರಿದ್ದಾರೆ.
ಲೂನಾ-25 ಪ್ರೋಬ್, ಲ್ಯಾಂಡಿಂಗ್ ಪೂರ್ವ ಕುಶಲತೆಯ ಸಮಯದಲ್ಲಿ ಚಂದ್ರನ ಮೇಲ್ಮೈಯಲ್ಲಿ ಅಪ್ಪಳಿಸಿದ್ದರಿಂದ ರಷ್ಯಾದ ಚಂದ್ರಯಾನದ ಭರವಸೆ ಭಗ್ನಗೊಂಡಿತು. ಈ ಕಾರ್ಯಾಚರಣೆಯಲ್ಲಿ ಕೆಲಸ ಮಾಡಿದ್ದ ವಿಜ್ಞಾನಿ ಮಿಖಾಯಿಲ್ ಮಾರೊವ್ (90) ಮಿಷನ್ ವಿಫಲವಾದ ಸುದ್ದಿ ಕೇಳಿ ಅನಾರೋಗ್ಯಕ್ಕೀಡಾಗಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ನಾನು ನಿಗಾ ಘಟಕದಲ್ಲಿದ್ದೇನೆ. ಹೀಗಾದಾಗ ಚಿಂತಿಸದಿರಲು ಹೇಗೆ ಸಾಧ್ಯ (ಲೂನಾ-25 ಮಿಷನ್ ವಿಫಲ)? ಇದು ಜೀವನದ ವಿಷಯವೂ ಹೌದು. ತುಂಬಾ ಕಷ್ಟಕರವಾಗಿದೆ. ಚಂದ್ರನ ಮೇಲೆ ನೌಕೆಯನ್ನು ಇಳಿಸಲು ಸಾಧ್ಯವಾಗದಿರುವುದು ಬೇಸರ ತರಿಸಿದೆ ಎಂದು ವಿಜ್ಞಾನಿ ಮಾರೊವ್ ಮಾಸ್ಕೋದ ಕ್ರೆಮ್ಲಿನ್ಗೆ ಸಮೀಪದಲ್ಲಿರುವ ಸೆಂಟ್ರಲ್ ಕ್ಲಿನಿಕಲ್ ಆಸ್ಪತ್ರೆಯಲ್ಲಿ ಮಾತನಾಡಿದ್ದಾರೆ. ವಿಜ್ಞಾನಿ ಮಾರೊವ್, ಸೋವಿಯತ್ ಒಕ್ಕೂಟದ ಹಿಂದಿನ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡಿದ್ದರು. ಲೂನಾ-25 ಮಿಷನ್ ತನ್ನ ಬದುಕಿನ ಕೆಲಸದ ಪರಾಕಾಷ್ಠೆ ಎಂದು ಹೇಳಿಕೊಂಡಿದ್ದರು.