ನೋಯ್ಡಾ: ತನ್ನ ಗಂಡನ ಜತೆಗೆ ವಾಸಿಸಲು ಬಯಸಿರುವುದಾಗಿ ಬಾಂಗ್ಲಾದೇಶದ ಮಹಿಳೆಯೊಬ್ಬಳು ಮಗುವಿನ ಸಮೇತ ಉತ್ತರ ಪ್ರದೇಶ ಪೊಲೀಸರನ್ನು ಸಂಪರ್ಕಿಸಿದ್ದಾಳೆ. ನೋಯ್ಡಾದಲ್ಲಿ ವಾಸವಾಗಿರುವ ವ್ಯಕ್ತಿ, ಢಾಕಾದಲ್ಲಿ ತನ್ನನ್ನು ಮೂರು ವರ್ಷಗಳ ಹಿಂದೆ ತನ್ನನ್ನು ಮದುವೆಯಾಗಿ ಕೈಕೊಟ್ಟು ಬಂದಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ.
ಢಾಕಾದ ನಿವಾಸಿ ಎಂದು ಸೋನಿಯಾ ಅಖ್ತರ್ ಹೇಳಿಕೊಂಡಿದ್ದಾಳೆ. ಆಕೆಯ ಗಂಡ ಸೌರಭ್ ಕಾಂತ್, ಸೆಂಟ್ರಲ್ ನೋಯ್ಡಾದ ಸೂರಜ್ಪುರದಲ್ಲಿ ವಾಸವಿದ್ದಾನೆ. “ನಮ್ಮ ಸಂಬಂಧವನ್ನು ಆತ ಈಗ ಒಪ್ಪುತ್ತಿಲ್ಲ. ನನ್ನನ್ನು ತನ್ನ ಮನೆಗೆ ಸೇರಿಸಿಕೊಳ್ಳುತ್ತಲೂ ಇಲ್ಲ. ನಾನು ಒಬ್ಬ ಬಾಂಗ್ಲಾದೇಶಿ. ನಾವು ಸುಮಾರು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದೆವು. ನಾನು ನಮ್ಮ ಮಗುವಿನೊಂದಿಗೆ ಗಂಡನ ಜತೆ ವಾಸಿಸಲು ಬಯಸಿದ್ದೇನಷ್ಟೇ” ಎಂದು ಆಕೆ ಸುದ್ದಿಗಾರರಿಗೆ ತಿಳಿಸಿದ್ದಾಳೆ.
ಆಕೆ ನೀಡಿರುವ ದೂರಿನ ಅನ್ವಯ ನೋಯ್ಡಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸೋನಿಯಾ ಅಖ್ತರ್ಗೆ ಅವರು ಬಿಗಿ ಭದ್ರತೆ ಒದಗಿಸಿದ್ದಾರೆ. “ಬಾಂಗ್ಲಾದೇಶದ ಪ್ರಜೆಯೊಬ್ಬರು, ಇಲ್ಲಿನ ಸೂರಜ್ಪುರದಲ್ಲಿ ವಾಸವಾಗಿರುವ ಸೌರಭ್ ಕಾಂತ್ ತಿವಾರಿ ಎಂಬಾತನ ಜತೆ ಮದುವೆಯಾಗಿದ್ದು, ಆದರೆ ಆತ ಆಕೆಯನ್ನು ತ್ಯಜಿಸಿ ಭಾರತಕ್ಕೆ ವಾಪಸ್ ಬಂದಿದ್ದಾನೆ ಎಂದು ಮಹಿಳಾ ಠಾಣೆಗೆ ಮಾಹಿತಿ ನೀಡಿದ್ದಾರೆ. ಸೌರಭ್ ಕಾಂತ್ಗೆ ಆಗಲೇ ಮದುವೆಯಾಗಿತ್ತು ಎಂದೂ ಆಕೆ ಆರೋಪಿಸಿದ್ದಾರೆ” ಎಂಬುದಾಗಿ ಸೆಂಟ್ರಲ್ ನೋಯ್ಡಾದ ಹೆಚ್ಚುವರಿ ಡಿಸಿಪಿ ರಾಜೀವ್ ದೀಕ್ಷಿತ್ ತಿಳಿಸಿದ್ದಾರೆ.