ವಾಷಿಂಗ್ಟನ್: ನನಗೆ ಸಲಹೆಗಾರರಾಗಿ ಇಲಾನ್ ಮಸ್ಕ್ ಅವರು ಇರಬೇಕೆಂದು ಅಪೇಕ್ಷಿಸುತ್ತೇನೆ ಎಂದು ಅಮೆರಿಕದ ಅಧ್ಯಕ್ಷೀಯ ಸ್ಥಾನದ ಆಕಾಂಕ್ಷಿ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ವಿವೇಕ್ ರಾಮಸ್ವಾಮಿ (Vivek Ramaswamy) ಹೇಳಿದರು. ಇಲಾನ್ ಮಸ್ಕ್ ಮಾದರಿಯಂತೆ. ಟ್ವಿಟ್ಟರ್ನಲ್ಲಿ ಇಲಾನ್ ಕತ್ತರಿ ಹಾಕಿ ಚೊಕ್ಕಟ ಮಾಡಿದಂತೆ ಅಮೆರಿಕ ಆಡಳಿತದಲ್ಲಿ ಸುಧಾರಣೆ ತರುವೆ ಎಂದು ಭಾರತ ಮೂಲದ 38 ವರ್ಷದ ವಿ ರಾಮಸ್ವಾಮಿ ಹೇಳಿದ್ದಾರೆ.
ತಾನೊಂದು ವೇಳೆ ಅಮೆರಿಕದ ಅಧ್ಯಕ್ಷನಾಗಿದ್ದೇ ಆದಲ್ಲಿ ನನ್ನ ಸಲಹೆಗಾರನಾಗಿ ಮಸ್ಕ್ (Elon Musk) ಅವರನ್ನೇ ನೇಮಕ ಮಾಡುವುದಾಗಿ ಅವರು ತಿಳಿಸಿದ್ದಾರೆ. 2022ರಲ್ಲಿ ಟ್ವಿಟ್ಟರ್ ಅನ್ನು ಖರೀದಿಸಿದ ಬಳಿಕ ಇಲಾನ್ ಮಸ್ಕ್ ಅವರು ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸಿದ ಬಳಿಕ ಕಂಪನಿಯ ಕಾರ್ಯನಿರ್ವಹಣೆ ಉತ್ತಮಗೊಂಡಿತ್ತು. ಅಂಥದ್ದೇ ರೀತಿಯಲ್ಲಿ ಅಮೆರಿಕದ ಅಧ್ಯಕ್ಷೀಯ ಆಡಳಿತದ ಕಾರ್ಯಕ್ಷಮೆ ಹೆಚ್ಚಿಸುವುದಾಗಿ ವಿವೇಕ್ ರಾಮಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರದ ಒಳಗೆ ಇರದ ಮತ್ತು ಹೊಚ್ಚ ಹೊಸ ಮುಖಗಳು ನನಗೆ ಬೇಕು. ಇತ್ತೀಚೆಗೆ ಇಲಾನ್ ಮಸ್ಕ್ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡು ಅಚ್ಚರಿಪಟ್ಟಿದ್ದೇನೆ. ನನಗೆ ಸಲಹೆಗಾರರಾಗಿ ಅವರು ಇರಬೇಕೆಂದು ಅಪೇಕ್ಷಿಸುತ್ತೇನೆ. ಟ್ವಿಟ್ಟರ್ನಲ್ಲಿ ಶೇ. 75ರಷ್ಟು ಉದ್ಯೋಗಿಗಳನ್ನು ಅವರು ಲೇ ಆಫ್ ಮಾಡಿದರು. ಅದರ ಪರಿಣಾಮವಾಗಿ ಕಂಪನಿಯ ಕಾರ್ಯಕ್ಷಮತೆ ಹೆಚ್ಚಿತು ಎಂದು ಅಮೆರಿಕ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ತಿಳಿಸಿದ್ದಾರೆ.
ಟ್ವಿಟ್ಟರ್ ಅನ್ನು ಇಲಾನ್ ಮಸ್ಕ್ ಹೇಗೆ ನಿರ್ವಹಿಸುತ್ತಿದ್ದಾರೋ ಅದೇ ರೀತಿ ಸರ್ಕಾರದ ಆಡಳಿತವನ್ನು ನಡೆಸುತ್ತೇನೆ. ಶೇ. 75ರಷ್ಟು ಅನಗತ್ಯ ವೆಚ್ಚವನ್ನು ತೆಗೆದುಹಾಕುವುದು ಮತ್ತು ಆಡಳಿತದ ಕಾರ್ಯಕ್ಷಮತೆ ಹೆಚ್ಚಿಸುವುದು ಹೇಗೆಂಬುದಕ್ಕೆ ಟ್ಟಿಟ್ಟರ್ ಒಂದು ಉತ್ತಮ ನಿದರ್ಶನ ಎಂದು ಫಾಕ್ಸ್ ನ್ಯೂಸ್ ವಾಹಿನಿಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.