ಮಾಸ್ಕೋ: ಚಂದ್ರನ (Moon) ಅಂಗಳಕ್ಕೆ ರಷ್ಯಾ (Russia) ಕಳುಹಿಸಿದ್ದ ಲೂನಾ-25 (Luna-25) ಮಿಷನ್ ವಿಫಲವಾಗಿ ಅಪ್ಪಳಿಸಿದ ಪರಿಣಾಮವಾಗಿ ಚಂದ್ರನ ಮೇಲ್ಮೈನಲ್ಲಿ ಕುಳಿಯಾಗಿದೆ ಎಂದು ಚಿತ್ರವೊಂದನ್ನು ಬಿಡುಗಡೆ ಮಾಡಿ ನಾಸಾ (NASA) ಹೇಳಿದೆ. ಭಾರತ ಉಡ್ಡಯನ ಮಾಡಿದ್ದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಚಂದ್ರನ ಮೇಲೆ ಇಳಿಯುವ ಮೊದಲೇ ತಾನು ಲ್ಯಾಂಡ್ ಆಗಬೇಕು ಎಂದು ರಷ್ಯಾ ಲೂನಾ-25 ನೌಕೆ ಕಳುಹಿಸಿತ್ತು. ಆದರೆ ರಷ್ಯಾದ ಚಂದ್ರಯಾನ ಮಿಷನ್ ವಿಫಲವಾಯಿತು. ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ಗೆ ಮುಂದಾಗಿದ್ದ ರಷ್ಯಾದ ನೌಕೆ ವಿಫಲವಾಗಿ ಚಂದ್ರನ ಮೇಲೆ ಅಪ್ಪಳಿಸಿತ್ತು.
ಯುಎಸ್ ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ನ ಲೂನಾರ್ ರೆಕಾನೈಸೆನ್ಸ್ ಆರ್ಬಿಟರ್ (LRO) ಬಾಹ್ಯಾಕಾಶ ನೌಕೆಯು ಚಂದ್ರನ ಮೇಲ್ಮೈಯಲ್ಲಿ ಹೊಸ ಕುಳಿಯನ್ನು ಪತ್ತೆ ಮಾಡಿದೆ. ಅದು ರಷ್ಯಾದ ಲೂನಾ-25 ಮಿಷನ್ನ ಪ್ರಭಾವದ ಸ್ಥಳ ಎಂದು ತೀರ್ಮಾನಿಸಿದೆ. ಈ ಹೊಸ ಕುಳಿಯು ಸುಮಾರು 10 ಮೀಟರ್ ವ್ಯಾಸವನ್ನು ಹೊಂದಿದೆ ಎಂದು ನಾಸಾ ಹೇಳಿದೆ. ಹೊಸ ಕುಳಿಯು ಲೂನಾ-25 ಅಂದಾಜು ಪ್ರಭಾವದ ಬಿಂದುವಿಗೆ ಹತ್ತಿರವಾಗಿದೆ. ಹೀಗಾಗಿ ಕುಳಿಯು ನೈಸರ್ಗಿಕ ಪ್ರಭಾವದ ಬದಲಿಗೆ ರಷ್ಯಾದ ನೌಕೆಯಿಂದ ಆಗಿರಬಹುದು ಎಂದು LRO ತಂಡವು ಹೇಳಿದೆ.
47 ವರ್ಷಗಳ ಬಳಿಕ ರಷ್ಯಾವು ಚಂದ್ರನ ಮೇಲ್ಮೈ ಅಧ್ಯಯನಕ್ಕಾಗಿ ಲೂನಾ-25 ನೌಕೆಯನ್ನು ಉಡಾವಣೆ ಮಾಡಿತ್ತು. ಆದರೆ ನೌಕೆಯು ಆಗಸ್ಟ್ 19 ರಂದು ವಿಫಲವಾಯಿತು. ಅದು ರಷ್ಯಾದ ಬಾಹ್ಯಾಕಾಶ ಸಂಸ್ಥೆಯಿಂದ ನಿಯಂತ್ರಣ ಕಳೆದುಕೊಂಡು ಚಂದ್ರನಿಗೆ ಅಪ್ಪಳಿಸಿತು. ಲೂನಾ-25 ನೌಕೆ ವಿಫಲವಾಗಲು ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಸಲು ಆಯೋಗವೊಂದನ್ನು ರಚಿಸಲಾಗಿದೆ ಎಂದು ರಷ್ಯಾ ಈಚೆಗೆ ಹೇಳಿತ್ತು.