ನಾವು ತಿನ್ನುವ ತಿಂಡಿ ಅಥವಾ ಊಟದ ಮೇಲೆ ನಮಗೆ ಗಮನ ಇರುವುದಿಲ್ಲ. ಹಾಗಾಗಿ ಊಟದ ನಿಜವಾದ ಸ್ವಾದವನ್ನು ನಾವು ಅನುಭವಿಸಲು ಸಾಧ್ಯವಾಗುತ್ತಿಲ್ಲ. ತೃಪ್ತಿಕರವಾಗಿ ಊಟ ಮಾಡಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲ. ದಿನೇ ದಿನೇ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಜೊತೆಗೆ ದೇಹದ ತೂಕ ಹಾಗೂ ಬೊಜ್ಜು ಕೂಡ ಹೆಚ್ಚಾಗಿದೆ. ಆದರೆ ಇತ್ತೀಚೆಗೆ ಸ್ಮಾರ್ಟ್ಫೋನ್ ಮೇಲೆ ನಡೆಸಲಾದ ಸಂಶೋಧನೆಯಿಂದ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಟಾಯ್ಲೆಟ್ ಸೀಟ್ನಲ್ಲಿ ಕಂಡು ಬರುವ ಕೀಟಾಣುಗಳಿಗಿಂತ ಮೂರು ಪಟ್ಟು ಕೀಟಾಣುಗಳು ಸ್ಮಾರ್ಟ್ ಫೋನ್ ಸ್ಕ್ರೀನ್ಗಳಲ್ಲಿರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಸ್ಮಾರ್ಟ್ ಫೋನ್ ಬಳಸುವ ಶೇ.35 ರಷ್ಟು ಜನರು ತಮ್ಮ ಮೊಬೈಲ್ನ್ನು ಸ್ವಚ್ಛಗೊಳಿಸುವ ಗೋಜಿಗೆ ಹೋಗುವುದಿಲ್ಲ. ವೈಪ್, ಫ್ಲುಯೆಡ್ ಗಳನ್ನು ಬಳಸಿ ಮೊಬೈಲ್ ಸ್ಕ್ರೀನ್ಗಳನ್ನು ಕ್ಲೀನ್ ಮಾಡಬೇಕಿರುವುದು ಹೆಚ್ಚಿನವರಿಗೆ ತಿಳಿದಿಲ್ಲ. ಪ್ರತಿ 20 ಸ್ಮಾರ್ಟ್ ಫೋನ್ ಬಳಕೆದಾರರಲ್ಲಿ ಒಬ್ಬರು ಮಾತ್ರ 6 ತಿಂಗಳಿಗೊಮ್ಮೆ ಸ್ಮಾರ್ಟ್ ಫೋನ್ ಸ್ವಚ್ಛಗೊಳಿಸುತ್ತಾರೆ ಎಂದು ಇಂಗ್ಲೆಂಡ್ನ 2ಗೋ ಮೊಬೈಲ್ ಇನ್ಶುರೆನ್ಸ್ ಸಂಸ್ಥೆ ನಡೆಸಿರುವ ಅಧ್ಯಯನದಿಂದ ತಿಳಿದು ಬಂದಿದೆ.
ಎರೋಬಿಕ್ ಬ್ಯಾಕ್ಟೀರಿಯಾ, ಯೀಸ್ಟ್, ವೌಲ್ಡ್ ಪ್ರಮಾಣವನ್ನು ಪರೀಕ್ಷಿಸಲು ಅಧ್ಯಯನ ತಂಡವು ಐಫೊನ್ 6, ಗೂಗಲ್ ಪಿಕ್ಸೆಲ್ ಮತ್ತು ಸ್ಯಾಮ್ಸಂಗ್ ಗ್ಯಾಲೆಕ್ಸಿ 8 ಮೊಬೈಲ್ಗಳನ್ನು ಆಯ್ದುಕೊಂಡಿದ್ದರು. ಹಾಗೆಯೇ ಎಲ್ಲ ಮೊಬೈಲ್ಗಳಲ್ಲೂ ಎರೋಬಿಕ್ ಬ್ಯಾಕ್ಟೀರಿಯಾ, ಯೀಸ್ಟ್ ಮತ್ತು ವೌಲ್ಡ್ ಕೀಟಾಣುಗಳು ಕಂಡು ಬಂದಿದ್ದು, ಅದರಲ್ಲೂ ಸ್ಕ್ರೀನ್ನಲ್ಲಿ ಅಧಿಕ ಪ್ರಮಾಣದಲ್ಲಿ ಕೀಟಾಣುಗಳು ಕಂಡು ಬಂದಿದೆ. ಇದರಿಂದ ಚರ್ಮ ಮತ್ತು ಇತರೆ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎಂದು ಅಧ್ಯಯನ ತಂಡ ತಿಳಿಸಿದೆ.
ಅಧ್ಯಯನಕ್ಕಾಗಿ ಬಳಸಲಾದ ಮೊಬೈಲ್ ಸ್ಕ್ರೀನ್ಗಳ ಪ್ರತಿ ಚದರ ಸೆಂ.ಮೀ.ಗೆ 254.9 ಕಾಲನಿ ಫಾರ್ಮಿಂಗ್ ಯುನಿಟ್ಗಳಿದ್ದವು. ಅಂದರೆ ಪ್ರತಿ ಸ್ಕ್ರೀನ್ ಸರಾಸರಿ 84.9 ಯುನಿಟ್ಗಳು. ಹಾಗೆಯೇ ಟಾಯ್ಲೆಟ್ಗಳ ಸೀಟ್ ಮತ್ತು ಫ್ಲಷ್ಗಳಲ್ಲಿ ಕೇವಲ 24 ಯುನಿಟ್ ಪ್ರಮಾಣದಲ್ಲಿ ಕೀಟಾಣುಗಳಿದ್ದವು. ಆಫೀಸ್ ಕಂಪ್ಯೂಟರ್, ಮೌಸ್ ಮತ್ತು ಕೀಬೋರ್ಡ್ಗಳನ್ನು ಪರಿಶೀಲಿಸಿದಾಗ ಇದರ ಪ್ರಮಾಣ ಕೇವಲ 5 ಯುನಿಟ್ಗಳಷ್ಟಿತ್ತು ಎಂದು ಸಂಶೋಧಕರು ತಿಳಿಸಿದ್ದಾರೆ.
ಸ್ಮಾರ್ಟ್ ಫೋನ್ಗಳ ಹಿಂಭಾಗದಲ್ಲಿ ಸರಾಸರಿ 30 ಯುನಿಟ್, ಲಾಕ್ ಬಟನ್ 23.8 ಮತ್ತು ಹೋಮ್ ಬಟನ್ 10.6 ಯುನಿಟ್ಗಳನ್ನು ಹೊಂದಿತ್ತು. ಅದೇ ರೀತಿ ಸಂಶೋಧನೆಗೆ ಒಳಪಡಿಸಲಾದ ಸ್ಮಾರ್ಟ್ ಫೋನ್ ಬಳಕೆದಾರರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಯಾವತ್ತೂ ತಮ್ಮ ಮೊಬೈಲ್ಗಳನ್ನು ಸ್ವಚ್ಛ ಮಾಡಿರಲಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ಅಧ್ಯಯನ ತಂಡ ತಿಳಿಸಿದೆ. ನಾವು ಸ್ಮಾರ್ಟ್ ಫೊನ್ಗಳಿಂದ ದೂರವಿರುವುದಿಲ್ಲ. ಸದಾ ಮೊಬೈಲ್ಗಳನ್ನು ಎಲ್ಲೆಡೆ ಕೊಂಡೊಯ್ಯುತ್ತೇವೆ. ಇದರಿಂದ ಕೆಲವು ಸೂಕ್ಷ್ಮಜೀವಿಗಳು ಮೊಬೈಲ್ನಲ್ಲಿ ಕಾಣಿಸಿಕೊಳ್ಳುತ್ತದೆ ಎಂದು 2ಗೂ ಸಂಸ್ಥೆಯ ಅಧಿಕಾರಿ ಗ್ಯಾರಿ ಬೀಸ್ಟನ್ ತಿಳಿಸಿದ್ದಾರೆ.