ಮುಂಬೈ: ತರಬೇತಿ ನಿರತ ಗಗನಸಖಿಯೊಬ್ಬರು (Air Hostess) ಸಂಜೆ ಮುಂಬೈ (Mumbai) ಉಪನಗರದಲ್ಲಿರುವ ಅವರ ಫ್ಲಾಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಛತ್ತೀಸ್ಗಢದಿಂದ ಬಂದಿದ್ದ ರೂಪಲ್ ಓಗ್ರೆ, ಏರ್ ಇಂಡಿಯಾದಿಂದ ಆಯ್ಕೆಯಾಗಿದ್ದರು. ಈ ವರ್ಷದ ಏಪ್ರಿಲ್ನಲ್ಲಿ ಮುಂಬೈಗೆ ಸ್ಥಳಾಂತರಗೊಂಡಿದ್ದರು. ಕೆಲವು ದಿನಗಳ ಹಿಂದೆ ತವರು ಮನೆಗೆ ಹೋಗಿದ್ದ ತನ್ನ ಸಹೋದರಿ ಮತ್ತು ತನ್ನ ಗೆಳೆಯನೊಂದಿಗೆ ಅಂಧೇರಿಯ ಪ್ಲಶ್ ಹೌಸಿಂಗ್ ಸೊಸೈಟಿಯಲ್ಲಿ ತನ್ನ ಫ್ಲಾಟ್ನಲ್ಲಿ ವಾಸಿಸುತ್ತಿದ್ದರು.
ಗಗನಸಖಿ ಸಾವಿಗೆ ಸಂಬಂಧಿಸಿದಂತೆ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ 40 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಆತನನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಪ್ರಮುಖ ಆರೋಪಿ ವಿಕ್ರಮ್ ಅತ್ವಾಲ್ನನ್ನು ಬಂಧಿಸಲಾಗಿದೆ. ಹೌಸಿಂಗ್ ಸೊಸೈಟಿಯಲ್ಲಿನ ಭದ್ರತಾ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳ ಪತ್ತೆಗೆ 12 ತಂಡಗಳನ್ನು ರಚಿಸಲಾಗಿದೆ. ಸ್ವೀಪರ್ ವಿಕ್ರಮ್ ಅತ್ವಾಲ್ ಪತ್ನಿಯನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಗಗನಸಖಿ ರೂಪಾಲ್ಗೆ ಆಕೆಯ ಮನೆಯವರು ಫೋನ್ ಕರೆ ಮಾಡಿದ್ದರು. ಆದರೆ ಆಕೆ ಕಾಲ್ ಪಿಕ್ ಮಾಡಲಿಲ್ಲ. ಅನುಮಾನಗೊಂಡು ಮುಂಬೈನಲ್ಲಿದ್ದ ಆಕೆಯ ಸ್ನೇಹಿತರಿಗೆ ಪರೀಕ್ಷಿಸುವಂತೆ ತಿಳಿಸಿದ್ದಾರೆ.
ಆಕೆಯ ಸ್ನೇಹಿತರು ಅಲ್ಲಿಗೆ ಹೋಗಿ ನೋಡಿದಾಗ ಫ್ಲಾಟ್ ಒಳಗಿನಿಂದ ಬೀಗ ಹಾಕಿರುವುದು ಕಂಡು ಬಂದಿದೆ. ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಫ್ಲಾಟ್ಗೆ ಬಂದು ನೋಡಿದ್ದಾರೆ. ಗಗನಸಖಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಕೆ ಮೃತಪಟ್ಟಿದ್ದಾಳೆ ಎಂದು ನಂತರ ವೈದ್ಯರು ಸ್ಪಷ್ಟಪಡಿಸಿದರು.z