ನವದೆಹಲಿ: ಹಿಂದೂ (Hindu) ಸಮಾಜದ ಅನಿಷ್ಟಗಳಿಗೆ ಮುಸ್ಲಿಮರ ಆಕ್ರಮಣವೇ (Islamic Invasions) ಕಾರಣ ಎಂದು ಆರ್ಎಸ್ಎಸ್ (RSS) ಜಂಟಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಗೋಪಾಲ್ (Krishna Gopal) ವ್ಯಾಖ್ಯಾನಿಸಿದ್ದಾರೆ. ನಾರಿ ಶಕ್ತಿ ಸಂಗಮ್ನ ಆಶ್ರಯದಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ (Delhi University) ಮಹಿಳಾ ಸಬಲೀಕರಣದ ಕುರಿತು ಮಾತನಾಡಿದ ಅವರು, 12 ನೇ ಶತಮಾನದ ಮೊದಲು, ಮಹಿಳೆಯರು ಸ್ವತಂತ್ರರಾಗಿದ್ದರು ಮತ್ತು ಭಾರತೀಯ ಸಮಾಜಕ್ಕೆ ಗಣನೀಯ ಕೊಡುಗೆ ನೀಡಿದ್ದರು.
ಬಾಲ್ಯ ವಿವಾಹ, ಸತಿಪದ್ದತಿ, ವಿಧವಾ ವಿವಾಹ ನಿಷೇಧದಂತಹ ಸಾಮಾಜಿಕ ಅನಿಷ್ಟಗಳು ಭಾರತಕ್ಕೆ (India) ಬರಲು ಇಸ್ಲಾಮಿಕ್ ಆಕ್ರಮಣವೇ ಕಾರಣ. ಮಧ್ಯಕಾಲೀನ ಅವಧಿಯಲ್ಲಿ ಮುಸ್ಲಿಮ್ ಆಕ್ರಮಣಕಾರರಿಂದ ಮಹಿಳೆಯರನ್ನು ರಕ್ಷಿಸಿಕೊಳ್ಳಲು ಅವರ ಮೇಲೆ ನಾನಾ ನಿರ್ಬಂಧ ಹೇರಲಾಗುತ್ತಿತ್ತು ಎಂದರು. ಮಧ್ಯಯುಗದಲ್ಲಿ ದೇವಸ್ಥಾನಗಳನ್ನು (Temple) ಧ್ವಂಸ ಮಾಡಲಾಯಿತು. ವಿಶ್ವವಿದ್ಯಾನಿಲಯಗಳನ್ನು ನಾಶಪಡಿಸಲಾಯಿತು ಮತ್ತು ಮಹಿಳೆಯರು ಅಪಾಯದಲ್ಲಿದ್ದರು.
ಲಕ್ಷಗಟ್ಟಲೆ ಮಹಿಳೆಯರನ್ನು ಅಪಹರಿಸಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಲಾಯಿತು. ಅಹ್ಮದ್ ಷಾ ಅಬ್ದಾಲಿ, ಮಹಮ್ಮದ್ ಘೋರಿ, ಮಹಮ್ಮದ್ ಘಜ್ನಿ ಸೇರಿದಂತೆ ಎಲ್ಲರೂ ಇಲ್ಲಿಂದ ಮಹಿಳೆಯರನ್ನು ಕದ್ದು ಮಾರಾಟ ಮಾಡಿದ್ದರು. ಅದೊಂದು ಮಹಾ ಅವಮಾನದ ಯುಗ. ಆದ್ದರಿಂದ ನಮ್ಮ ಮಹಿಳೆಯರನ್ನು ರಕ್ಷಿಸಲು ನಮ್ಮದೇ ಸಮಾಜವು ಅವರ ಮೇಲೆ ಅನೇಕ ನಿರ್ಬಂಧಗಳನ್ನು ಹಾಕಿತ್ತು ಎಂದು ಗೋಪಾಲ್ ಹೇಳಿದರು.