ಸಾಕಷ್ಟು ಕುತೂಹಲ ಮೂಡಿಸಿರುವ ಕಾವೇರಿ ನೀರಿನ (Cauvery Water) ಸಮಸ್ಯೆಯ ವಿಚಾರಣೆ ಇಂದು ಸುಪ್ರೀಂಕೋರ್ಟ್ನಲ್ಲಿ ನಡೆಯಲಿದೆ. ಈ ಮಹತ್ವದ ವಿಚಾರಣೆಯ ತೀರ್ಪಿಗೆ ಕಾವೇರಿ ತಾಯಿಯ ಮಕ್ಕಳು ಎದುರು ನೋಡ್ತಾ ಇದ್ದಾರೆ. ಮುಂಗಾರು ಮಳೆ ಕೊರತೆಯಿಂದ ಕಾವೇರಿ ನದಿ ಅಕ್ಷರಶಃ ಒಣಗಿನಿಂತಿದೆ. ಕಾವೇರಿಯ ಒಡಲು ಎಂದು ಕರೆಸಿಕೊಳ್ಳುವ ಮಂಡ್ಯ ಜಿಲ್ಲೆಯ ಕೆಆರ್ಎಸ್ ಡ್ಯಾಂನಲ್ಲಿ (KRS Dam) ನೀರಿನ ಮಟ್ಟ ನೆಲಕ್ಕೆ ಮುಟ್ಟುತ್ತಿದೆ.
ಸದ್ಯ ಕೆಆರ್ ಎಸ್ ನೀರಿನ ಮಟ್ಟ 98.86 ಅಡಿಗೆ ಕುಸಿದಿದ್ದು, ಕಾವೇರಿ ಕೊಳ್ಳ ವ್ಯಾಪ್ತಿಯ ಜನರಿಗೆ ಭೀಕರ ಜಲಕ್ಷಾಮ ಎದುರಾಗೋ ಭೀತಿ ಶುರುವಾಗಿದೆ. ಈ ಮಧ್ಯೆ ಪಕ್ಕದ ತಮಿಳುನಾಡು ಸಂಕಷ್ಟ ಸೂತ್ರ ಅನುಸರಿಸದೇ ನೀರು ಕೇಳುತ್ತಿದೆ. ಸಿಡಬ್ಲ್ಯೂಎಂಎ ಆದೇಶಕ್ಕೂ ತೃಪ್ತಿಕಾಣದ ತಮಿಳುನಾಡು ಸುಪ್ರೀಂಕೋರ್ಟ್ (Supreme Court) ಮೆಟ್ಟಿಲೇರಿದ್ದು, ಇಂದು ಸುಪ್ರೀಂಕೋರ್ಟ್ನ ಸಾಂವಿಧಾನಿಕ ಪೀಠ ವಿಚಾರಣೆ ನಡೆಸಲಿದೆ.
ಕಾವೇರಿ ವಿಚಾರವಾಗಿ ಸಲ್ಲಿಕೆಯಾಗಿರುವ ನಾಲ್ಕು ಅರ್ಜಿಗಳನ್ನು ಇಂದು ಪರಿಶೀಲನೆ ಮಾಡಲಿರೋ ಸರ್ವೋಚ್ಛ ನ್ಯಾಯಾಲಯ ಇಂದೇ ಮಧ್ಯಂತರ ತೀರ್ಪು ನೀಡೋ ಸಾಧ್ಯತೆ ಇದೆ. ಜೂನ್, ಜುಲೈ, ಆಗಸ್ಟ್ ತಿಂಗಳ 80 ಟಿಎಂಸಿ ನೀರು ಬಿಟ್ಟಿಲ್ಲ ಎಂದು ತಮಿಳುನಾಡು ಅರ್ಜಿ ಸಲ್ಲಿಸಿದ್ರೆ, ಇತ್ತ ಕರ್ನಾಟಕವೂ ಪ್ರತಿ ದಾವೆ ಹೂಡಿದ್ದು, ಮುಂಗಾರು ಮಳೆ ಕೈಕೊಟ್ಟಿದೆ. ಕೆಆರ್ಎಸ್, ಕಬಿನಿ, ಹೇಮಾವತಿ, ಹಾರಂಗಿ ಡ್ಯಾಂಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ತುಂಬಿಲ್ಲ. ಹೀಗಿದ್ರು ಸಹ ಮೂರು ತಿಂಗಳಿಂದ ಇಲ್ಲಿಯವರೆಗೆ 35 ಟಿಎಂಸಿ ನೀರು ಬಿಟ್ಟಿದ್ದೇವೆ, ತಮಿಳುನಾಡು ಹೇಳುವಷ್ಟು ನೀರು ಬಿಟ್ಟರೆ ಇಲ್ಲಿನ ಜನರಿಗೆ ಕುಡಿಯೋ ನೀರಿಗೆ ಸಮಸ್ಯೆ ಆಗುತ್ತೆ ಎಂದು ಉಲ್ಲೇಖ ಮಾಡಿದೆ.
ಮತ್ತೊಂದ್ಕಡೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಸಹ ಸುಪ್ರೀಂಗೆ ಅರ್ಜಿ ಹಾಕಿದೆ. ಅರ್ಜಿಯಲ್ಲಿ ನಾವು ಇದುವರೆಗೆ ಹೇಳಿದಷ್ಟು ನೀರನ್ನು ಕರ್ನಾಟಕ ಬಿಟ್ಟಿದೆ, ಈ ನಡುವೆ ತಮಿಳುನಾಡು ಇನ್ನಷ್ಟು ನೀರು ಕೇಳ್ತಾ ಇದೆ. ತಮಿಳುನಾಡು ಮೆಟ್ಟೂರು ಡ್ಯಾಂ ನೀರನ್ನು ಸರಿಯಾಗಿ ಬಳಕೆ ಮಾಡಿಲ್ಲ. ಒಂದು ವೇಳೆ ಬಳಕೆ ಮಾಡಿಕೊಂಡಿದ್ರೆ ನೀರು ಕೇಳೋ ಸ್ಥಿತಿ ಬರ್ತಾ ಇರಲಿಲ್ಲ ಎಂದು ಅರ್ಜಿಯಲ್ಲಿ ಹೇಳಿದೆ. ಈ ಮಧ್ಯೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ರೈತ ಸಂಘವೂ ಸುಪ್ರೀಂಕೋರ್ಟ್ ಕದ ತಟ್ಟಿದ್ದು, ಯಾವುದೇ ಕಾರಣಕ್ಕೂ ನೀರು ಬಿಡಬಾರದೆಂದು ಅರ್ಜಿ ಸಲ್ಲಿಸಿದೆ.
ಒಂದು ಕಡೆ ಕಾನೂನು ಹೋರಾಟ ನಡೆಯುತ್ತಿದ್ರೆ ಇನ್ನೊಂದೆಡೆ ಸಕ್ಕರೆ ನಾಡು ಮಂಡ್ಯದಲ್ಲಿ ಪ್ರತಿಭಟನೆಯ ಕಾವು ದಿನೇ ದಿನೇ ಹೆಚ್ಚುತ್ತಿದೆ. ಇಂದು ಕೂಡ ಮಂಡ್ಯದಲ್ಲಿ ಪ್ರತಿಭಟನೆ ನಡೆಸಲು ರೈತಸಂಘಗಳು ನಿರ್ಧರಿಸಿವೆ. ಒಟ್ಟಾರೆ, ಕಾವೇರಿ ಕೊಳ್ಳದ ನೀರಿನ ವಾಸ್ತವಿಕ ಅಂಶ ತಿಳಿದು ಸುಪೀಂಕೋರ್ಟ್ ತೀರ್ಪು ನೀಡಲಿ ಎಂಬುದು ಕನ್ನಡಗಿರ ಆಶಯವಾಗಿದ್ದು, ಸುಪ್ರೀಂ ತೀರ್ಪು ಯಾರ ಪರ ಬರಲಿದೆ ಅನ್ನೋದು ಕಾದುನೋಡಬೇಕು.