ಹುಬ್ಬಳ್ಳಿ :- ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಶುಕ್ರವಾರ ಸಂಜೆ ಧಿಡೀರ್ ಭೇಟಿ ನೀಡಿ, ಠಾಣೆಯಲ್ಲಿ ಅರ್ಧ ತಾಸಿಗೂ ಹೆಚ್ಚು ಸಮಯ ಕಳೆದರು. ಠಾಣೆಯಲ್ಲಿನ ಪಾರ್ಸ್ಪೋರ್ಟ್, ಎಫ್ಐಆರ್ ದಾಖಲಾತಿ, ಕಾನೂನು ಸುವ್ಯವಸ್ಥೆ ಹಾಗೂ ಇನ್ನಿತರ ವಿಷಯಗಳ ಕುರಿತು ಪೊಲೀಸ್ ಸಿಬ್ಬಂದಿಯಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ, ಸಾರ್ವಜನಿಕರ ಸಮಸ್ಯೆಗಳಿಗೆ ಜನಸ್ನೇಹಿಯಾಗಿ ಸ್ಪಂಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ತಿಳಿಸಿದರು.
ಕಳೆದ ವರ್ಷ ಹಳೇ ಹುಬ್ಬಳ್ಳಿ ಠಾಣೆ ಎದುರು ನಡೆದ ಗಲಾಟೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆ ಘಟನೆ ಕುರಿತು ಪರಿಶೀಲಿಸಲು ಠಾಣೆಗೆ ಭೇಟಿ ನೀಡಿಲ್ಲ. ಕಾನೂನು ಪ್ರಕಾರ ಸೂಕ್ತ ಕಾರ್ಯಾಚರಣೆ ನಡೆಯುತ್ತದೆ. ಘಟನೆಯಲ್ಲಿ ಕೆಲವು ಅಮಾಯಕರನ್ನು ಬಂಧಿಸಿದ್ದು, ಬಿಡುಗಡೆಗೊಳಿಸುವಂತೆ ಸ್ಥಳೀಯ ಶಾಸಕರು ಹಾಗೂ ಬಂಧನಕ್ಕೊಳಗಾದವರ ಸಂಬಂಧಿಕರು ಮನವಿ ಸಲ್ಲಿಸಿದ್ದಾರೆ. ಈ ಕುರಿತು ಉಪ ಸಂಪುಟ ಸಮಿತಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಗೆ ಯಾವುದೇ ರೀತಿಯ ಹಾನಿ ಆಗುವುದಿಲ್ಲ. ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಕಾಣಲಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಮಹೇಂದ್ರ ಸಿಂಘಿ, ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಹಾಗೂ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.