ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಹೊಸದಿಲ್ಲಿಗೆ ಆಗಮಿಸಿದ್ದ ಇಟಲಿ, ಚೀನಾಕ್ಕೆ ಆಘಾತ ನೀಡಿದೆ. ಹೂಡಿಕೆ ಒಪ್ಪಂದವೊಂದರಿಂದ ಹೊರ ನಡೆಯಲು ಆಲೋಚಿಸುತ್ತಿರುವುದಾಗಿ ಇಟಲಿ ಪ್ರಧಾನಿ ಜಿಯೊರ್ಜಿಯಾ ಮೆಲೋನಿ ಅವರು ಚೀನಾ ಪ್ರಧಾನಿ ಲಿ ಕಿಯಾಂಗ್ ಅವರಿಗೆ ಸುಳಿವು ನೀಡಿದ್ದಾರೆ. ಚೀನಾ ಜತೆಗಿನ ಒಪ್ಪಂದವು, ಅಮೆರಿಕದೊಂದಿಗಿನ ಇಟಲಿ ಸಂಬಂಧಕ್ಕೆ ತೊಡಕು ಉಂಟುಮಾಡುವ ಅಪಾಯದ ನಡುವೆ ಅವರು ಈ ತೀರ್ಮಾನಕ್ಕೆ ಬಂದಿದ್ದಾರೆ.
ಭಾರತದಲ್ಲಿ ನಡೆದ ಜಿ20 ಶೃಂಗಸಭೆಯ ವೇಳೆ ಇಟಲಿ ಮತ್ತು ಚೀನಾ ಪ್ರಧಾನಿಗಳು ದ್ವಿಪಕ್ಷೀಯ ಮಾತುಕತೆ ನಡೆಸಿದರು. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಮಹತ್ವಾಕಾಂಕ್ಷೆಯ ಬೆಲ್ಟ್ ಆಂಡ್ ರೋಡ್ ಯೋಜನೆಯಿಂದ (ಬಿಆರ್ಐ) ಹಿಂದೆ ಸರಿಯಲು ಇಟಲಿ ಚಿಂತನೆ ನಡೆಸಿದೆ ಎಂದು ಮೆಲೋನಿ ಅವರು ಕಿಯಾಂಗ್ಗೆ ಮನವರಿಕೆ ಮಾಡಿದ್ದಾರೆ. ಆದರೆ ಚೀನಾ ಜತೆಗಿನ ಸ್ನೇಹ ಸಂಬಂಧವನ್ನು ಮುಂದುವರಿಸಲು ಬಯಸಿರುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚೀನಾ ಮತ್ತು ಇಟಲಿ ಈ ಯೋಜನೆಗೆ 2019ರಲ್ಲಿ ಅಧಿಕೃತವಾಗಿ ಸಹಿ ಹಾಕಿದ್ದವು. ಜಾಗತಿಕ ಮೂಲಸೌಕರ್ಯ ಕುರಿತಾದ ಮಹತ್ವದ ಒಪ್ಪಂದದಿಂದ ಹಿಂದೆ ಸರಿದರೆ ಚೀನಾವು ವ್ಯಾಪಾರ ಕ್ಷೇತ್ರದಲ್ಲಿ ಪ್ರತೀಕಾರಕ್ಕೆ ಮುಂದಾಗಬಹುದು ಎಂಬ ಭೀತಿಯೊಂದಿಗೆ, ತಮ್ಮ ಸರ್ಕಾರದ ನಿರ್ಧಾರವನ್ನು ತಿಳಿಸಲು ಇಟಲಿ ಪ್ರಧಾನಿ ಮೆಲೋನಿ ಅವರು ಸಾಕಷ್ಟು ಸಮಯ ತೆಗೆದುಕೊಂಡಿದ್ದರು ಎನ್ನಲಾಗಿದೆ.
ಈ ಬೃಹತ್ ಯೋಜನೆಯಿಂದ ಹೊರಗೆ ಬರುವ ಉದ್ದೇಶವನ್ನು ತನ್ನ ಮಿತ್ರ ದೇಶಗಳ ಜತೆ ಇಟಲಿ ಈ ವರ್ಷದ ಆರಂಭದಲ್ಲಿ ಹಂಚಿಕೊಂಡಿತ್ತು. ಆದರೆ ಅಂತ ನಿರ್ಧಾರವು ಪ್ರತೀಕಾರದ ಅಪಾಯವನ್ನು ಎದುರಿಸುವಂತಹ ಸಂದರ್ಭ ಬರಬಹುದು ಎಂಬ ಕಾರಣಕ್ಕೆ ಚೀನಾಕ್ಕೆ ಅದನ್ನು ಯಾವ ರೀತಿ ಮನವರಿಕೆ ಮಾಡುವುದು ಎಂದು ಪ್ರಧಾನಿ ಮೆಲೋನಿ ಅವರು ಹಲವಾರು ತಿಂಗಳುಗಳಿಂದ ಗೊಂದಲದಲ್ಲಿ ಇದ್ದರು ಎಂದು ಬ್ಲೂಮ್ಬರ್ಗ್ ವರದಿ ಮಾಡಿತ್ತು.