ಪ್ರಭಾಸ್ (Prabhas) ಮತ್ತು ಪ್ರಶಾಂತ್ ನೀಲ್ (Prashant Neel) ಕಾಂಬಿನೇಷನ್ ನ ‘ಸಲಾರ್’ (Salaar) ಸಿನಿಮಾ ಸೆಪ್ಟಂಬರ್ 28ಕ್ಕೆ ರಿಲೀಸ್ (Release) ಆಗಲಿದೆ ಎಂದು ಈ ಹಿಂದೆಯೇ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ಘೋಷಣೆ ಮಾಡಿತ್ತು. ಆದರೆ, ಇದೀಗ ಅನಿವಾರ್ಯ ಕಾರಣಗಳಿಂದಾಗಿ ಅಂದು ಸಿನಿಮಾವನ್ನು ಬಿಡುಗಡೆ ಮಾಡಲು ಆಗುತ್ತಿಲ್ಲವೆಂದು ಘೋಷಣೆ ಮಾಡಿದೆ.
ಸಿನಿಮಾ ಬಿಡುಗಡೆ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಹೊಂಬಾಳೆ ಫಿಲ್ಮಸ್, ‘ನಾವು ಅತ್ಯುತ್ತಮವಾದ ಸಿನಿಮಾವನ್ನು ಕೊಡಲು ಸಿದ್ಧವಾಗುತ್ತಿದ್ದೇವೆ. ನಾನಾ ಕಾರಣಗಳಿಂದಾಗಿ ಸೆ.28ರಂದು ಸಿನಿಮಾ ಬಿಡುಗಡೆ ಮಾಡಲು ಆಗುತ್ತಿಲ್ಲ. ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇವೆ. ಬಿಡುಗಡೆ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು’ ಎಂದು ಬರೆದುಕೊಂಡಿದ್ದಾರೆ.
ಬಲ್ಲ ಮೂಲಗಳ ಪ್ರಕಾರ ದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚುವುದು ಗ್ಯಾರಂಟಿ ಎನ್ನುವ ವಿಷಯ ಸಿನಿಮಾ ಟೀಮ್ ನಿಂದಲೇ ಹರಿದು ಬಂದಿದೆ. ಸಲಾರ್ ಸಿನಿಮಾಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ನಡೆಯುತ್ತಿರುವುದರಿಂದ ಬಿಡುಗಡೆಯ ದಿನಾಂಕವನ್ನು ಮುಂದೂಡುವುದು ಅನಿವಾರ್ಯವಾಗಿದೆ.
ಸಲಾರ್ ಸಿನಿಮಾವನ್ನು ನೋಡಲು ಪ್ರಭಾಸ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು. ಈ ತಿಂಗಳು ಸಿನಿಮಾ ರಿಲೀಸ್ ಆಗದೇ ಇರುವುದು ಅವರಿಗೆ ಕಂಡಿತಾ ನಿರಾಸೆ ಆಗಿರುತ್ತದೆ. ಆದರೆ, ನಿರಾಸೆಯನ್ನು ಹೋಗಲಾಡಿಸುವಂತಹ ಚಿತ್ರವನ್ನು ಕೊಡುವ ಪ್ರಾಮೀಸ್ ಹೊಂಬಾಳೆ ಸಂಸ್ಥೆಯದ್ದು.