ಭೀಕರ ವಾಹನ ಅಪಘಾತದಲ್ಲಿ ತಿರುಪತಿಗೆ ತೆರಳಿದ್ದ ಬೆಳಗಾವಿ ಜಿಲ್ಲೆಯ ಐವರು ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂದ್ರದ ಅನ್ನಮ್ಮಯ್ಯ ಜಿಲ್ಲೆಯ ಕೆವಿಪಲ್ಲಿ ತಾಲೂಕಿನ ಮಾಠಂಪಲ್ಲಿಯಲ್ಲಿ ನಡೆದಿದೆ. ಅಪಘಾತದಲ್ಲಿ 11 ಜನರು ಗಾಯಗೊಂಡಿದ್ದು, ನಿವಾಸಿಗಳೆಲ್ಲರೂ ಬೆಳಗಾವಿ ಜಿಲ್ಲೆಯವರು ಎಂಬ ಮಾಹಿತಿ ಲಭ್ಯವಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಡಚು ಗ್ರಾಮದ ನಿವಾಸಿಗಳು ಕ್ರೂಸರ್ ವಾಹನದ ಮೂಲಕ ಆಂಧ್ರದ ತಿರುಪತಿ ಪ್ರವಾಸ ಕೈಗೊಂಡಿದ್ದರು.
ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಭಕ್ತಾದಿಗಳು ಮತ್ತೆ ತಮ್ಮ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದರು. ಇಂದು ನಸುಕಿನ ಜಾವ ಸರಿ ಸುಮಾರು 3.30ಕ್ಕೆ ಮಾಠಂ ಪಲ್ಲಿ ಗ್ರಾಮದ ಬಳಿ ಲಾರಿ ಮತ್ತು ಕ್ರೂಜರ್ ನಡುವೆ ರಸ್ತೆ ಅಪಘಾತ ಸಂಭವಿಸಿದೆ. ಕ್ರೂಸರ್ ವಾಹನದಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿ ಒಟ್ಟು 16 ಜನರು ಪ್ರಯಾಣಿಸುತ್ತಿದ್ದು, ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ವಾಹನದಲ್ಲಿ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಹೊರಕ್ಕೆ ತೆಗೆದಿದ್ದು ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತರನ್ನು ಹನುಮಂತ(38), ಮತ್ತೋರ್ವ ಹನುಮಂತ (ಚಾಲಕ, 42), ಅಂಬಿಕಾ (14), ಶೋಭಾ (36) ಮತ್ತು ಮಹಾನಂದ (32) ಎಂದು ಗುರುತಿಸಲಾಗಿದೆ. ಮೃತರಲ್ಲಿ ಶೋಭಾ ಮತ್ತು ಅಂಬಿಕಾ ತಾಯಿ-ಮಗಳಾಗಿದ್ದಾರೆ.
ಕಸ್ತೂರಿ, ಮೇಘಾ, ಶಿವಾನಂದ, ಬಸಪ್ಪ, ಮಲ್ಲಪ್ಪ,ಅಕ್ಷತಾ, ಉದಯ, ಸುನಂದಾ, ಮಹೇಶ್, ಸಾಕ್ಷಿ ಮತ್ತು ಬಸವರಾಜ ಸೇರಿದಂತೆ ಒಟ್ಟು 11 ಜನರು ಗಾಯಗೊಂಡಿದ್ದಾರೆ. ಸ್ಥಳೀಯರ ನೆರವಿನಿಂದ ಪೊಲೀಸರು ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಿಯ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇದರಲ್ಲಿ ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.