ಕಳೆದ 5 ವರ್ಷಗಳಿಂದ ಪ್ರಶಸ್ತಿ ಗೆಲುವಿನ ಬರ ಎದುರಿಸುತ್ತಿರುವ ಭಾರತ ತಂಡಕ್ಕೆ 16ನೇ ಆವೃತ್ತಿಯ ಏಷ್ಯಾಕಪ್ ಏಕದಿನ ಟೂರ್ನಿಯಲ್ಲಿ ಇದನ್ನು ನೀಗಿಸಿಕೊಳ್ಳುವ ಸುವರ್ಣಾವಕಾಶ ಎದುರಾಗಿದೆ.
ತವರಿನ ಏಕದಿನ ವಿಶ್ವಕಪ್ ಟೂರ್ನಿಗೆ ಮುನ್ನ ರಾಹುಲ್ ದ್ರಾವಿಡ್-ರೋಹಿತ್ ಶರ್ಮ ಅವರ ಕೋಚ್-ಕ್ಯಾಪ್ಟನ್ ಕಾಂಬಿನೇಷನ್ಗೆ ಏಷ್ಯಾಕಪ್ ಕಿರೀಟ ದೊಡ್ಡ ಟಾನಿಕ್ ಆಗಲಿದೆ.
ಸೂಪರ್-4 ಹಂತದಲ್ಲಿ ಪಾಕ್, ಲಂಕಾ ಎದುರು ಭರ್ಜರಿ ಗೆಲುವು ದಾಖಲಿಸಿ ಪ್ರಶಸ್ತಿ ಸುತ್ತಿಗೇರುವುದನ್ನು ಖಚಿತಪಡಿಸಿಕೊಂಡಿದ್ದ ಭಾರತ, ಬಾಂಗ್ಲಾ ವಿರುದ್ಧದ ಔಪಚಾರಿಕ ಪಂದ್ಯದಲ್ಲಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಕೈಸುಟ್ಟುಕೊಂಡಿತ್ತು. ಇದರಿಂದ ಗೆಲುವಿನ ಲಯ ತಪ್ಪಿದ್ದರೂ, ಉಪನಾಯಕ ಹಾರ್ದಿಕ್ ಪಾಂಡ್ಯ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್ರಂಥ ಪ್ರಮುಖರ ಗೈರಲ್ಲಿ ಈ ಸೋಲು ಎದುರಾಗಿರುವುದರಿಂದ ಹೆಚ್ಚಿನ ಹಿನ್ನಡೆ ತಂದಿಲ್ಲ. ದಸುನ್ ಶನಕ ಪಡೆಯ ವಿರುದ್ಧ ಭಾರತ ತಂಡ ಪ್ರಶಸ್ತಿ ಸುತ್ತಿನಲ್ಲಿ ವಿಶ್ವಾಸದಿಂದಲೇ ಕಣಕ್ಕಿಳಿಯಲಿದೆ. ಸೂಪರ್-4 ಮುಖಾಮುಖಿಯಲ್ಲಿ ಕಂಡ ಗೆಲುವು ಕೂಡ ಭಾರತಕ್ಕೆ ವಿಶ್ವಾಸ ತುಂಬಿದೆ. ಆದರೆ ಎಡಗೈ ಸ್ಪಿನ್ನರ್ ದುನಿತ್ ವೆಲ್ಲಲಾಗೆ ಅವರನ್ನು ಈ ಬಾರಿ ಎಚ್ಚರಿಕೆಯಿಂದ ಎದುರಿಸಬೇಕಾಗಿದೆ. ಪಾಕಿಸ್ತಾನ ವಿರುದ್ಧ ರೋಚಕ ಗೆಲುವು ದಾಖಲಿಸಿ ಫೈನಲ್ಗೇರಿರುವ ಲಂಕಾ ಕೂಡ ಈ ಬಾರಿ ವಿಶ್ವಾಸದಿಂದಲೇ ಕಣಕ್ಕಿಳಿಯಲಿದೆ. ಜತೆಗೆ ಲಂಕಾಗೆ ತವರಿನ ಲಾಭವೂ ಇದೆ.