ವಾಷಿಂಗ್ಟನ್: ಮುಂಬರುವ ಅಮೆರಿಕ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಬಯಸಿರುವ ಭಾರತ ಮೂಲದ ವಿವೇಕ್ ರಾಮಸ್ವಾಮಿ ಅವರು 2024ರಲ್ಲಿ ಶ್ವೇತ ಭವನ ಪ್ರವೇಶಿಸಿದರೆ ಎಚ್-1ಬಿ ವೀಸಾ ಯೋಜನೆಯ ಲಾಟರಿ ಆಧಾರಿತ ಪದ್ಧತಿಯನ್ನು ರದ್ದುಗೊಳಿಸಿ, ಅರ್ಹತಾ ಪ್ರವೇಶ ವ್ಯವಸ್ಥೆ ಜಾರಿಗೊಳಿಸುವುದಾಗಿ ಹೇಳಿದ್ದಾರೆ.
ಎಚ್-1ಬಿ ವೀಸಾ, ವಲಸೆಯೇತರ ವೀಸಾ ವ್ಯವಸ್ಥೆಯಾಗಿದ್ದು, ಭಾರತದ ಐಟಿ ಉದ್ಯೋಗಿಗಳು ಹೆಚ್ಚಾಗಿ ಇದಕ್ಕೆ ಬೇಡಿಕೆ ಇರಿಸುತ್ತಾರೆ. ತಾಂತ್ರಿಕ ಪರಿಣತಿ ಅಗತ್ಯವಿರುವ ಕೆಲವು ವಿಶೇಷ ಉದ್ಯೋಗಗಳಿಗೆ ವಿದೇಶಿ ಕೆಲಸಗಾರರನ್ನು ನಿಯೋಜಿಸಲು ಅಮೆರಿಕದ ಕಂಪೆನಿಗಳಿಗೆ ಈ ವೀಸಾ ಅನುವು ಮಾಡುತ್ತದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಸಾವಿರಾರು ಉದ್ಯೋಗಿಗಳನ್ನು ಕರೆಯಿಸಿಕೊಳ್ಳಲು ಟೆಕ್ ಕಂಪೆನಿಗಳು ಈ ವೀಸಾ ವ್ಯವಸ್ಥೆಯನ್ನು ಅವಲಂಬಿಸಿವೆ.
ಎಚ್-1ಬಿ ವೀಸಾ ಪದ್ಧತಿಯು ‘ಗುಲಾಮಗಿರಿಯ ಒಪ್ಪಂದ’ ಎಂದು ವಿವೇಕ್ ರಾಮಸ್ವಾಮಿ ಟೀಕಿಸಿದ್ದಾರೆ. ಆದರೆ ಸ್ವತಃ ಅವರೇ ಈ ವೀಸಾ ಯೋಜನೆಯನ್ನು 29 ಬಾರಿ ಬಳಕೆ ಮಾಡಿದ್ದಾರೆ. ವಿವೇಕ್ ರಾಮಸ್ವಾಮಿ ಅವರ ಮಾಜಿ ಕಂಪೆನಿ ರೋಯಿವ್ಯಾಂಟ್ ಸೈನ್ಸಸ್ಗೆ ಎಚ್-1ಬಿ ವೀಸಾಗಳ ಅಡಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು 2018 ರಿಂದ 2023ರವರೆಗೆ 29 ಅರ್ಜಿಗಳನ್ನು ಅಮೆರಿಕದ ಪೌರತ್ವ ಮತ್ತು ವಲಸೆ ಸೇವಾ ವಿಭಾಗವು ಅನುಮೋದಿಸಿತ್ತು.
ಆದರೂ ಎಚ್-1ಬಿ ವೀಸಾವು ಅದರಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಕೆಟ್ಟದ್ದು ಎಂದು ವಿವೇಕ್ ರಾಮಸ್ವಾಮಿ ಹೇಳಿಕೆ ನೀಡಿದ್ದಾರೆ. “ಲಾಟರಿ ವ್ಯವಸ್ಥೆಯನ್ನು ವಾಸ್ತವ ಅರ್ಹತೆ ಪ್ರವೇಶದೊಂದಿಗೆ ಬದಲಿಸಬೇಕಿದೆ. ಇದು ಗುಲಾಮಗಿರಿ ಒಪ್ಪಂದದ ರೂಪವಾಗಿದೆ ಅಷ್ಟೇ. ಎಚ್-1ಬಿ ವಲಸೆಗೆ ಪ್ರಾಯೋಜಕತ್ವ ವಹಿಸುವ ಕಂಪೆನಿಗೆ ಮಾತ್ರವೇ ಇದರಿಂದ ಲಾಭ ಸಿಗುತ್ತದೆ. ನಾನು ಇದನ್ನು ಬದಲಿಸುತ್ತೇನೆ” ಎಂದು ಹೇಳಿದ್ದಾರೆ.